ಹೊಸಪೇಟೆಯಲ್ಲಿ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಹಕ್ಕುಪತ್ರ ವಿತರಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿಜಯನಗರದ ಹೊಸಪೇಟೆಯಲ್ಲಿ ಮೇ 20 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ದೆಹಲಿಯ ನಾಯಕರಿಗೆ ಆಹ್ವಾನ ನೀಡಿದ್ದು, ಅವರೆಲ್ಲರೂ ಭಾಗವಹಿಸುತ್ತಿದ್ದಾರೆ.
ಖರ್ಗೆ ಮತ್ತು ರಾಹುಲ್ ಗಾಂಧಿ ಭಾಗವಹಿಸುವ ಈ ಸಮಾವೇಶದ ಪೂರ್ಣ ಖರ್ಚು-ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿಯುವ ಸಮಾವೇಶವನ್ನಾಗಿ ಮಾಡಲು ಸರ್ಕಾರ ಮತ್ತು ಕಾಂಗ್ರೆಸ್ ನಿಂದ ಶ್ರಮ ವಹಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಸಮಾವೇಶದ ಯಶಸ್ವಿಗಾಗಿ ಸಚಿವರಾದ ಕೃಷ್ಣಬೈರೇಗೌಡ, ಸತೀಶ್ ಜಾರಕಿಹೊಳ್ಳಿ, ಡಾ.ಶರಣಪ್ರಕಾಶ್ ಪಾಟೀಲ್, ಡಾ.ಹೆಚ್.ಸಿ.ಮಹದೇವಪ್ಪ, ಎನ್.ಎಸ್.ಬೋಸರಾಜ್, ಪ್ರಿಯಾಂಕ್ ಖರ್ಗೆ, ಎಸ್.ಎಸ್.ಮಲ್ಲಿಕಾರ್ಜುನ್, ಮಂಕಾಳವೈದ್ಯ, ಶಿವಾನಂದ ಪಾಟೀಲ್, ಶಿವರಾಜ ತಂಗಡಗಿ, ಕೆ.ಎನ್.ರಾಜಣ್ಣ, ಎನ್.ಚಲುವರಾಯಸ್ವಾಮಿ, ಲಕ್ಷಿö್ಮÃ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಮಧು ಬಂಗಾರಪ್ಪ, ಶರಣಬಸಪ್ಪ ದರ್ಶನಾಪೂರ್, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಸೇರಿದಂತೆ ೬೪ ಹಿರಿಯ ಶಾಸಕರನ್ನೊಳಗೊಂಡ ಸಮಿತಿ ರಚಿಸಿ ಅವರಿಗೆ ನಿರ್ದಿಷ್ಟ ಹೊಣೆಗಾರಿಕೆ ನೀಡಲಾಗಿದೆ.
ಇವರಿಗೆ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಕೆಲವು ಭಾಗಗಳಲ್ಲಿನ ವಿಧಾನಸಭಾ ಕ್ಷೇತ್ರಗಳಲ್ಲಿ ತಮಗೆ ವಹಿಸಿದ ಜವಾಬ್ದಾರಿಯಂತೆ ಸಭೆಗಳನ್ನು ನಡೆಸಿ ಸಮಾವೇಶಕ್ಕೆ ಜನರನ್ನು ಕರೆತರುವಂತೆ ನಿರ್ದೇಶನ ನೀಡಲಾಗಿದೆ.
ಸರ್ಕಾರ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ವಿವಿಧ ತಾಂಡಗಳಲ್ಲಿ ವಾಸಿಸುವ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಸಜ್ಜಾಗಿದೆ.
ಹಟ್ಟಿ, ಹಾಡಿ, ತಾಂಡ, ಪಾಳ್ಯ, ಮಜುರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅಲ್ಲಿ ವಾಸಿಸುತ್ತಿರುವ ಅಷ್ಟೂ ಮಂದಿಗೆ ಕಂಪ್ಯೂಟರೈಸ್ಡ್ ನೋಂದಾಯಿತ ದಾಖಲೆಗಳನ್ನು ನೀಡಲಿದ್ದಾರೆ.
ಸಚಿವರು ಮತ್ತು ಶಾಸಕರು ಇಂತಹ ಜನವಸತಿಗಳಿಗೆ ತೆರಳಿ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ತಲುಪಿಸಿ ಅವರಿಗೆ ಅಧಿಕಾರಿಗಳಿಂದ ದಾಖಲೆಗಳು ತಲುಪಿವೆಯೇ ಎಂದು ಪರಿಶೀಲನೆ ಮಾಡಿ ಅವರು ಸಮಾವೇಶಕ್ಕೆ ಬರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನೀಡಲಾಗಿದೆ.
ಜನವಸತಿಗಳಿಂದ ಬರುವ ಈ ಫಲಾನುಭವಿಗಳ ಸಾರಿಗೆ ಹಾಗೂ ಊಟದ ವ್ಯವಸ್ಥೆಯನ್ನು ಸರ್ಕಾರ ಮಾಡುವುದರ ಜೊತೆಗೆ ಆಯ್ದ ಕೆಲವರಿಗೆ ರಾಹುಲ್ ಗಾಂಧಿ ಮತ್ತು ಖರ್ಗೆ ಅವರು ಹಕ್ಕು ಪತ್ರವನ್ನು ವಿತರಿಸಲಿದ್ದಾರೆ. ಸಚಿವರು ಮತ್ತು ಶಾಸಕರು ತಮಗೆ ವಹಿಸಿರುವ ತಾಲ್ಲೂಕು ಅಥವಾ ಕ್ಷೇತ್ರಗಳಿಗೆ ಈಗಾಗಲೇ ತೆರಳಿ ಸ್ಥಳೀಯ ಮುಖಂಡರ ಸಭೆ ನಡೆಸಿದ್ದಾರೆ.
ಮುಖಂಡರ ಸಭೆಯ ಬಳಿಕ ಜನವಸತಿಗಳಿಗೆ ಭೇಟಿ ನೀಡಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
