ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಿಎಂ ಇ-ಡ್ರೈವ್ ಯೋಜನೆಯಡಿ ಕರ್ನಾಟಕಕ್ಕೆ 4,500 ಎಲೆಕ್ಟ್ರಿಕ್ ಬಸ್‌ಗಳ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಬಸ್‌ಗಳ ಹಂಚಿಕೆಗೆ ಮುನ್ನ ರಾಜ್ಯ ಸಾರಿಗೆ ಸಂಸ್ಥೆ ತಮ್ಮ ಬಸ್ ಡಿಪೋಗಳಲ್ಲಿ ಚಾರ್ಜಿಂಗ್ ಕೇಂದ್ರ, ಡಿಪೋಗಳ ಮೇಲ್ದರ್ಜೆ, ಅಗತ್ಯ ಬಿದ್ದಲ್ಲಿ ಹೊಸ ಡಿಪೋಗಳ ಸ್ಥಾಪನೆ ಸೇರಿದಂತೆ ಮೂಲಸೌಕರ್ಯಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಕೇಂದ್ರ ಸಚಿವರು ಸೂಚಿಸಿದರು.
ಮಾಲಿನ್ಯರಹಿತ ಸಮೂಹ ಸಾರಿಗೆ
ಮಾಲಿನ್ಯರಹಿತ ಸಮೂಹ ಸಾರಿಗೆ ವ್ಯವಸ್ಥೆ ಬಲಪಡಿಸುವುದು ರಾಷ್ಟ್ರೀಯ ಅಗತ್ಯವಾಗಿದೆ, ಎಲೆಕ್ಟ್ರಿಕ್ ಬಸ್‌ಗಳ ಹಂಚಿಕೆಯಲ್ಲಿ ಬೇಡಿಕೆ, ಜನಸಂಖ್ಯೆ ಹಾಗೂ ಹಳೆಯ ಬಸ್‌ಗಳ ವಿಲೇವಾರಿ ಅಂಶಗಳನ್ನು ಪರಿಗಣಿಸಲಾಗಿದೆ ಎಂದರು.
ಎಲೆಕ್ಟ್ರಿಕ್ ಬಸ್‌ಗಳ ಹಂಚಿಕೆ ಸಂಬಂಧ ಕೇಂದ್ರ ಸಚಿವರ ಸಭೆಯಲ್ಲಿ ಕರ್ನಾಟಕ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಪಾಲ್ಗೊಂಡು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ 7,000 ಎಲೆಕ್ಟ್ರಿಕ್ ಬಸ್‌ಗಳ ಬೇಡಿಕೆ ಸಲ್ಲಿಸಿದರು.
ಕಳೆದ ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಎಲೆಕ್ಟ್ರಿಕ್ ಬಸ್‌ಗಳಿಗೆ ಬೇಡಿಕೆ ಇಟ್ಟಿದ್ದರು.
ಅತ್ಯಧಿಕ ಬಸ್‌ಗಳ ಹಂಚಿಕೆ
ಮೊದಲ ಹಂತದಲ್ಲಿಯೇ ಬೆಂಗಳೂರಿಗೆ ಅತ್ಯಧಿಕ ಬಸ್‌ಗಳ ಹಂಚಿಕೆ ಭರವಸೆಯನ್ನೂ ಕೇಂದ್ರ ಸಚಿವರು ನೀಡಿದ್ದಾರೆ.
ಒಟ್ಟಾರೆ ದೆಹಲಿ ಸೇರಿದಂತೆ ದೇಶದ ಐದು ಪ್ರಮುಖ ನಗರಗಳಿಂದ 14,200 ಬಸ್‌ಗಳಿಗೆ ಬೇಡಿಕೆ ಇದ್ದು, ಈ ಪೈಕಿ 10,900 ಬಸ್‌ಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಉದ್ಯಾನ ನಗರಿ ಬೆಂಗಳೂರಿಗೆ ಸಿಂಹಪಾಲು ದೊರೆಯಲಿದೆ, ಸುಮಾರು 800ಕಿ.ಮೀ. ವ್ಯಾಪ್ತಿಯಲ್ಲಿ ಬಿಎಂಟಿಸಿ ಕಾರ್ಯಾಚರಣೆ ನಡೆಸುತ್ತಿರುವ ಅಂಶವನ್ನು ಸಭೆಯಲ್ಲಿ ಪರಿಗಣಿಸಲಾಯಿತು.
