ಬೆಂಗಳೂರು:ಮೈಸೂರು ಅರಮನೆ ಮಾದರಿಯಲ್ಲೇ ಪ್ರವಾಸಿಗರಿಗೆ ಶಕ್ತಿಸೌಧ (ವಿಧಾನಸೌಧ) ವೀಕ್ಷಣೆಗೆ ಸರ್ಕಾರ ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿದೆ.
ಪ್ರತಿ ತಿಂಗಳ 2 ಮತ್ತು ನಾಲ್ಕನೇ ಶನಿವಾರ ಹಾಗೂ ಎಲ್ಲಾ ಭಾನುವಾರದ ದಿನಗಳಂದು ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಕಾಲಮಿತಿ ನಿಗದಿ
ಜೂನ್ 1ರಿಂದಲೇ ಪ್ರವಾಸಿಗರು ವಿಧಾನಸೌಧ ವೀಕ್ಷಣೆ ಮಾಡಬಹುದಾಗಿದ್ದು, ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.
ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ವಿಧಾನಸೌಧ ವೀಕ್ಷಣೆ ಮಾಡಬಹುದಾಗಿದೆ. ಪ್ರವಾಸಿಗರು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವೆಬ್‌ಸೈಟ್ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹದಿನಾರು ವರ್ಷ ಮೇಲ್ಪಟ್ಟವರಿಗೆ ತಲಾ 50 ರೂ. ಪ್ರವೇಶ ಶುಲ್ಕವಿದ್ದು, 15 ವರ್ಷದೊಳಗಿನವರಿಗೆ ಉಚಿತ ಪ್ರವೇಶ, ಮುಂಗಡವಾಗಿ ಹೆಸರು ನೋಂದಾಯಿಸಿಕೊಳ್ಳಬೇಕು.
ದಿನಕ್ಕೆ 300 ಮಂದಿ
ಒಂದು ದಿನಕ್ಕೆ 300 ಮಂದಿಗೆ ಪ್ರವೇಶ ಇರಲಿದ್ದು, ವಿಧಾನಸೌಧ ಒಳಪ್ರವೇಶಿಸಲು ಬಯಸುವವರು ತಮ್ಮೊಂದಿಗೆ ಕಡ್ಡಾಯವಾಗಿ ಆಧಾರ್ ಅಥವಾ ಪಾಸ್‌ಪೋರ್ಟ್‌ನ ಮೂಲಪ್ರತಿ ತರಬೇಕು.
ಶಕ್ತಿಸೌಧದ ಒಳಗೆ ಹಾಗೂ ಆವರಣದಲ್ಲಿನ ವಿಶೇಷ ಸ್ಥಳಗಳ ವೀಕ್ಷಣೆಗೆ ಒಂದು ತಂಡಕ್ಕೆ 90 ನಿಮಿಷಗಳ ಸಮಯಾವಕಾಶ ಇರಲಿದೆ.
