ಐತಿಹಾಸಿಕ ದಸರಾಗೆ ಚಾಲನೆ ನೀಡಿದ ನಂತರ ನಾದಬ್ರಹ್ಮ ಹಂಸಲೇಖ ಮಾತು
ಮೈಸೂರು: ಕನ್ನಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು ಎಂದು ನಾದಬ್ರಹ್ಮ ಹಂಸಲೇಖ ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ದೇವಿ ಚಾಮುಂಡೇಶ್ವರಿ ತಾಯಿಗೆ ಬೆಳಗ್ಗೆ 10-15ರ ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ಸಲ್ಲಿಸಿ ಹಂಸಲೇಖ ಅವರು
ವಿಶ್ವವಿಖ್ಯಾತ ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.
ಪೂಜ್ಯ ಕನ್ನಡಿಗರಿಗೆ, ಪೂಜ್ಯ ಕನ್ನಡಕ್ಕೆ,ಈ ದೇವಾಲಯ ಪ್ರೇಮಾಲಯಕ್ಕೆ ನನ್ನ ಸಾವಿರ ಶರಣು ಎಂದು ಭಾಷಣ ಆರಂಭಿಸಿದ ಹಂಸಲೇಖ, ಕನ್ನಡ ಅರ್ಥ ಆಗುತ್ತೆ, ಆದರೆ ಓದಲು- ಬರೆಯಲು ಬರಲ್ಲ ಎನ್ನುವವರ ಸಮೀಕ್ಷೆ ಆಗಬೇಕು ಎಂದು ತಿಳಿಸಿದರು.
ಕನ್ನಡ ಗೊತ್ತಿಲ್ಲದವರಿಗೆ 30 ದಿನಗಳಲ್ಲಿ ಭಾಷೆ ಕಲಿಸಬೇಕು,ಕನ್ನಡ ಕಲಿತವರಿಗೆ ಜಮೀನು ಆರ್‌ಟಿಸಿ ಮಾದರಿಯಲ್ಲಿ ಕನ್ನಡ ಪಟ್ಟ ಕೊಡಬೇಕು ಎಂದು ಹೇಳಿದರು.
ಪ್ರತಿಮೆ, ಉದ್ಯಮ ವಿನಿಮಯ ಆಗಬೇಕು. ಹುಬ್ಬಳ್ಳಿ- ಬೆಳಗಾಂ ಪ್ರತಿಭೆ, ಉದ್ಯಮಗಳು ಬೆರೆಯುತ್ತಿವೆ,ಮಂಗಳೂರು- ಮೈಸೂರು ನಡುವೆ ಸಾಂಸ್ಕೃತಿಕ ವಿನಿಮಯ ಆಗಬೇಕು ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕದ ಏಕೀಕರಣಕ್ಕೆ ಈಗ ಐದಶ ಅಂದರೆ ಐವತ್ತು, ಏಕೀಕರಣಕ್ಕೆ ಐವತ್ತು ತುಂಬಿದೆ ಅದಕ್ಕಾಗಿ ಕರ್ನಾಟಕ ಐದಶ ಅಂತಾ ಕರೆಯೋಣ, ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಇದು ಬಹಳ ಬೆಲೆ ಬಾಳುವಂತಹದ್ದು ಈ ಅವಕಾಶ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹಾಗೂ ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ.
ಈ ಅವಕಾಶಕ್ಕೆ ಯಾರು ಕಾರಣ ಯಾರನ್ನು ಮೊದಲು ನೆನೆಯಲಿ, ಅಪ್ಪ ಗೋವಿಂದರಾಜ ಮಾನೆ, ಅಮ್ಮ ರಾಜಮ್ಮ, ಗುರು ನೀಲಕಂಠ ಅಥವಾ ನಾದ ನಾಟಕರಂಗ, ಸರ್ಕಾರ ಅಥವಾ ಸಂವಿಧಾನವನ್ನೇ, ಸಂವಿಧಾನದ ಗುಡ್ ಶಪರ್ಡ್ ಸಿದ್ದರಾಮಯ್ಯ ಅವರನ್ನೇ,
ಪ್ರಬಲ ಶಕ್ತಿ ಸಂಘಟಕ ಡಿಸಿಎಂ ಡಿ ಕೆ ಶಿವಕುಮಾರ್, ನನ್ನ ಹೆಸರು ಸೂಚಿಸಿದ ಡಾ ಎಚ್ ಸಿ ಮಹದೇವಪ್ಪ ಅವರನ್ನೇ, ನನ್ನ ಹೆಂಡತಿ ಮಕ್ಕಳು ಅಭಿಮಾನಿಗಳನ್ನೇ, ಅಥವಾ ಭೂಮಿ ತಾಯಿಯನ್ನೇ ಯಾರು ಯಾರು ಅಂತಾ ಹೇಳಲಿ ಎಂದು ಮನದುಂಬಿ ನುಡಿದರು.
ಇಲ್ಲಿ ನಿಂತು ಭೂಮಿ ತಾಯಿಯನ್ನ ಒಂದು ಘಳಿಗೆ ನೆನೆಯುತ್ತೇನೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ಈ ರೀತಿ ಧನ್ಯವಾದ ಹೇಳೋದು ನಮ್ಮ ಸಿನಿಮಾದವರ ಕೆಲಸ ಎಂದು ಭಾಷಣದುದ್ದಕ್ಕೂ ಕನ್ನಡದ ಮೇಲಿನ ಪ್ರೀತಿ ಮೆರೆದರು.
ಸಾಮಾನ್ಯ ವ್ಯಕ್ತಿ ಕೈಯಲ್ಲಿ ದಸರಾ ಉದ್ಘಾಟನೆ ಸಿಎಂ ಆಸೆ ಎಂದಿದ್ದರು ಹಾಗಾಗಿ ನನಗೆ ಉದ್ಘಾಟನೆ ಭಾಗ್ಯ ಸಿಕ್ಕಿದೆ, 50 ವರ್ಷಗಳು ನನ್ನ ಸಾಧನೆಗೆ ಕಾರಣರಾದವರನ್ನು ಮತ್ತು ಭೂಮಿ ತಾಯಿಯನ್ನ ನೆನೆದಿದ್ದೇನೆ ಎಂದು ಹಂಸಲೇಖ ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಸಚಿವರುಗಳಾದ ಡಾ. ಹೆಚ್. ಸಿ ಮಹದೇವಪ್ಪ, ಶಿವರಾಜ್ ತಂಗಡಡಗಿ, ಕೆ ಜೆ ಜಾರ್ಜ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಶ್ರೀವತ್ಸ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು,ಜಿ.ಟಿ ದೇವೇಗೌಡ, ಮೇಯರ್ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.