ಸಿಬಿಐ ತನಿಖೆ ಹೈಕೋರ್ಟ್ ಅಸ್ತು; ಬಂಡೆಗೆ ಸುಸ್ತೋ ಸುಸ್ತು
ಬೆಂಗಳೂರು: ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪ ಕುರಿತ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ರದ್ದುಪಡಿಸಬೇಕು ಎಂದು ಶಿವಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದರು.
ವಾದ ವಿವಾದ ಆಲಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ. ನಟರಾಜ್ ಅವರಿದ್ದ ಏಕ ಸದಸ್ಯ ಪೀಠ ಇಂದು ಪ್ರಕಟಿಸಿ ತನಿಖೆಯನ್ನು ಮೂರು ತಿಂಗಳೊಳಗೆ ಮುಗಿಸಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸಿಬಿಐಗೆ ಆದೇಶ ಮಾಡಿದೆ.
ನ್ಯಾಯಾಲಯದ ಈ ಆದೇಶ ಡಿ.ಕೆ.ಶಿವಕುಮಾರ್ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ. ಕಳೆದ ೨೦೨೦ರ ಅಕ್ಟೋಬರ್ನಲ್ಲಿ ಸಿಬಿಐ ದಾಖಲಿಸಿದ್ದ ಎಫ್ಐಆರ್ ಅನ್ನುಶಿವಕುಮಾರ್ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.
ಫೆಬ್ರವರಿ ೨೦೨೩ರಲ್ಲಿ ವಿಚಾರಣಾ ನ್ಯಾಯಾಲಯವೂ ತೀರ್ಪನ್ನು ತಡೆ ಹಿಡಿಯಲಾಗಿತ್ತು. ಇದೀಗ ನ್ಯಾಯಾಲಯ ಈ ತೀರ್ಪು ಶಿವಕುಮಾರ್ ದೊಡ್ಡ ಆಘಾತ ನೀಡಿದೆ.
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿರುವ ಶಿವಕುಮಾರ್ ಆ ಸ್ಥಾನ ಪಡೆಯಲು ಪಕ್ಷ ಸಂಘಟನೆಯ ಜೊತೆಗೆ ರಾಜಕೀಯ ತಂತ್ರಗಳನ್ನು ರೂಪಿಸುತ್ತಿರುವ ಸಂದರ್ಭದಲ್ಲೆ ಈ ತೀರ್ಪು ಬಂದಿರುವುದು ಸ್ವಲ್ಪ ಹಿನ್ನಡೆ ತಂದಂತಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಪಕ್ಷಕ್ಕೆ ೨೦ ಸ್ಥಾನಗಳನ್ನು ತಂದು ಕೊಡಲೇಬೇಕು ಎಂದು ಈಗಿನಿಂದಲೇ ಹೋರಾಟ ಆರಂಭಿಸಿದ್ದಾರೆ.
ಈ ಹೋರಾಟದ ಮಧ್ಯೆ ಆದಾಯ ತೆರಿಗೆ ಇಲಾಖೆ ಅವರ ಆಪ್ತರು ಎನ್ನುವವರ ಮೇಲೆ ಕೋಟ್ಯಾಂತರ ರೂ. ವಶಪಡಿಸಿಕೊಂಡು ತನಿಖೆ ಆರಂಭಿಸಿದೆ. ಅದರ ಬೆನ್ನಲ್ಲೇ ಕೋರ್ಟ್ ತೀರ್ಪು ಹೊರ ಬಿದ್ದಿದೆ.
ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ನೆಲದ ಕಾನೂನನ್ನು ಗೌರವಿಸುತ್ತೇನೆ. ಏನೂ ತಪ್ಪು ಮಾಡಿಲ್ಲ ಎಂಬುದು ನನಗೆ ತಿಳಿದೆ. ನಾನು ಶುದ್ಧವಾಗಿದ್ದೇನೆ.
ಬಿಜೆಪಿಯು ಸೇಡಿನ ರಾಜಕಾರಣ ಮಾಡುತ್ತಿದೆ. ಆದ್ದರಿಂದಲೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.
ಈಗಾಗಲೇ ಶೇ.೯೦ರಷ್ಟು ತನಿಖೆ ಪೂರ್ಣಗೊಂಡಿದೆ. ಯಾವ ಹಂತದಲ್ಲೂವಿಚಾರಣೆಗೆ ಒಳಪಡಿಸಿಲ್ಲ. ನನ್ನ ಮತ್ತು ನನ್ನ ಪತ್ನಿಗೆ ಸೇರಿದ ಆಸ್ತಿ ಬಗ್ಗೆ ವಿಚಾರಣೆ ನಡೆಯಬೇಕಿದೆ.
ನಾನು ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರೆಸುತ್ತೇನೆ. ಬಿಜೆಪಿಯ ಪಿತೂರಿ ಏನೇ ಇರಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸುವುದಾಗಿ ಹೇಳಿದ್ದಾರೆ.