ಬೆಂಗಳೂರು: ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಇಲ್ಲದೆ ಕಗ್ಗತ್ತಲಿನತ್ತ ಕರ್ನಾಟಕ ಸಾಗಲಿದೆ.
ಗ್ಯಾರೆಂಟಿ ಯೋಜನೆಗಳಿಗೆ ಹಣ ಕ್ರೋಡೀಕರಿಸುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಕೊರತೆಯಿಂದ ಕರ್ನಾಟಕ ವಿದ್ಯುತ್ ಕ್ಷಾಮ ಎದುರಿಸುವಂತಾಗಿದೆ.
ರಾಜ್ಯದ ೧೯ ಶಾಖೋತ್ಪನ್ನ ವಿದ್ಯುತ್ ಘಟಕಗಳ ಪೈಕಿ ಕಲ್ಲಿದ್ದಲ ಕೊರತೆಯಿಂದ ಕೇವಲ ೧೧ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹಾಲಿ ಇರುವ ಕಲ್ಲಿದ್ದಲು ದಾಸ್ತಾನು ಕೇವಲ ನಾಲ್ಕೈದು ದಿನಗಳಿಗೆ ಸಾಕಾಗಲಿದೆ.
ಅಷ್ಟರೊಳಗೆ ಕಲ್ಲಿದ್ದಲು ಖರೀದಿಸದಿದ್ದರೆ, ಇಡೀ ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ. ಎಲ್ಲಾ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಕಾರ್ಯನಿರ್ವಹಿಸಿದರೆ ಪ್ರತಿನಿತ್ಯ ೧೧ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ.
ಕಲ್ಲಿದ್ದಲು ಕೊರತೆಯಿಂದ ಈಗಾಗಲೇ ೮ ಸ್ಥಾವರಗಳು ಮುಚ್ಚಿದ್ದು, ಇದರಿಂದ ೫ ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಕೊರತೆಯಾಗಿದೆ.
ಇನ್ನು ನಾಲ್ಕೈದು ದಿನಗಳಲ್ಲಿ ಸ್ಥಾವರಗಳಿಗೆ ಅಗತ್ಯ ಕಲ್ಲಿದ್ದಲು ಪೂರೈಕೆ ಆಗದಿದ್ದರೆ, ವಿದ್ಯುತ್ ಉತ್ಪಾದನೆ ಕಾರ್ಯ ಸಂಪೂರ್ಣ ಸ್ಥಗಿತಗೊಳಿಸಲಿವೆ.
ರಾಯಚೂರು, ಬಳ್ಳಾರಿ, ಮಾನ್ವಿ ಸೇರಿದಂತೆ ರಾಜ್ಯದ ಬಹುತೇಕ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲಿಗಾಗಿ ಪರದಾಡುತ್ತಿವೆ.
ಈ ಮಧ್ಯೆ ಮಳೆ ಕೊರತೆಯಿಂದ ಜಲವಿದ್ಯುತ್ ಘಟಕಗಳೂ ಸಂಕಷ್ಟದಲ್ಲಿದ್ದು, ಲಿಂಗನಮಕ್ಕಿ ಜಲಾಶಯ, ಕಾಳಿ ಜಲಾಶಯ, ವರಾಹಿ ಜಲಾಶಯಗಳಲ್ಲಿ ಪ್ರಸ್ತುತ ಶೇ. ೪೦ರಿಂದ ಶೇ.೬೦ರಷ್ಟು ಮಾತ್ರ ನೀರು ಸಂಗ್ರಹ ಇದೆ.
ಸಂಕಷ್ಟ ಸಂದರ್ಭದಲ್ಲಿ ಜಲವಿದ್ಯುತ್ ಬಳಕೆ ಮಾಡಿಕೊಳ್ಳಲು ನಿರ್ಧರಿಸಿರುವ ಸರ್ಕಾರ, ಲೋಕಸಭಾ ಚುನಾವಣೆ ನಡೆಯಲಿರುವ ಏಪ್ರಿಲ್-ಮೇ ಸಂದರ್ಭದಲ್ಲಿ ಜಲ ವಿದ್ಯುತ್ ಬಳಕೆಗೆ ನಿರ್ಧರಿಸಿದೆ.
ಚುನಾವಣಾ ಸಂದರ್ಭದಲ್ಲಿ ವಿದ್ಯುತ್ ಅಭಾವ ಉಂಟಾದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೇಲೆ ವ್ಯತಿರಕ್ತ ಪರಿಣಾಮ ಬೀರಿ ಹಿನ್ನಡೆ ಆಗಬಹುದೆಂಬ ಮುಂದಾಲೋಚನೆಯಿಂದ ಈ ಕ್ರಮಕ್ಕೆ ಮುಂದಾಗಿದೆ.
ಈ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಿಕೊಡಲು ನೀರಿನ ಸಂಗ್ರಹವನ್ನು ಕಾಯ್ದಿಟ್ಟುಕೊಂಡಿದೆ.
ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮತ್ತು ವಿದ್ಯುತ್ ಕಂಪನಿಗಳಿಗೆ ಒಟ್ಟು ೪೦,೦೦೦ ಕೋಟಿ ರೂ. ಬಾಕಿ ಕೊಡಬೇಕಿದೆ.
ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಮುಂದಾಗಿರುವ ಕೆಪಿಟಿಸಿಎಲ್, ಸರ್ಕಾರದಿಂದ ಬರಬೇಕಿರುವ ೪೦,೦೦೦ ಕೋಟಿ ರೂ.ಗಳನ್ನು ಪಡೆಯಲು ಪರದಾಡುತ್ತಿದೆ.
ಒಂದು ರೇಕ್‌ನಷ್ಟು ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಕಳಿಸುತ್ತಿದ್ದು, ಇದರಿಂದ ಉಷ್ಣ ವಿದ್ಯುತ್ ಸ್ಥಾವರಗಳು ಇನ್ನೊಂದು ವಾರ ಉಸಿರಾಡಬಹುದಾಗಿದೆ.