ಪ್ರಧಾನಿ ಬಗ್ಗೆ ಸಿದ್ದರಾಮಯ್ಯ ಹಗುರ ಹೇಳಿಕೆ; ಯಡಿಯೂರಪ್ಪ ಕಟು ಟೀಕೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿನನಿತ್ಯ ಹಗುರ ಹೇಳಿಕೆ ನೀಡುತ್ತಿದ್ದರೆ, ನಿಮ್ಮ ಅಹವಾಲು ಯಾರು ಕೇಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋಗಿ ಕುಳಿತು ಪ್ರಧಾನಿ ಹಾಗೂ ಕೇಂದ್ರ ಸಚಿವರ ಸಮಯಾವಕಾಶ ಪಡೆದು ರಾಜ್ಯದ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿ ಜನತೆ ತತ್ತರಿಸಿದಾರೆ, ನೀವು ಪಕ್ಷ ರಾಜಕೀಯ ಮಾಡಿಕೊಂಡಿದ್ದೀರೆಯೇ ಹೊರತು, ವಾಸ್ತವ ಪರಿಸ್ಥಿತಿಯ ಕುರಿತು ಗಮನ ಹರಿಸಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೬ ತಿಂಗಳಾದರೂ ಅಭಿವೃದ್ಧಿ ಕಾರ್ಯಗಳು ಮುಂದುವರಿಯದೆ ಸ್ಥಗಿತಗೊಂಡಿವೆ.
ಮತದಾರರಿಗೆ ಅಪಾರ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಎರಡನೇ ಅವಧಿಯಲ್ಲಿ ಪಕ್ಷ ಮತ್ತು ಸರ್ಕಾರದ ಮೇಲೆ ನಿಯಂತ್ರಣ ಇಲ್ಲದ ಪರಿಸ್ಥಿತಿಯಲ್ಲಿ ಇದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಹೊರತುಪಡಿಸಿ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಉಳಿದ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ಮಾಡುತ್ತಿದ್ದಾರೆ.
ಸರ್ಕಾರ ಆರ್ಥಿಕ ದಿವಾಳಿಯಾಗಿದ್ದು, ಶಾಸಕರ ಅನುದಾನದ ಎರಡು ಕೋಟಿ ರೂ.ನಲ್ಲಿ ಕೇವಲ ೫೦ ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿದ್ದು, ಎಸ್‌ಸಿ, ಎಸ್‌ಟಿ ಯೋಜನೆಗಳ ಅನುಷ್ಠಾನ ಹಾಗೂ ನಿಗಮ-ಮಂಡಳಿಗಳಿಗೆ ಹಣ ಬಿಡುಗಡೆ ಮಾಡಿಲ್ಲ.
ಬರಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸೇರಿದಂತೆ ಯಾವೊಬ್ಬ ಸಚಿವರೂ ಭೇಟಿ ನೀಡಿ ವಾಸ್ತವಿಕ ಸ್ಥಿತಿ ತಿಳಿಯುವ ಪ್ರಯತ್ನ ಮಾಡಿಲ್ಲ.
ರೈತರು ಬರದ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಸಹಿತ ಉಚಿತ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ರಾಜ್ಯ ಸರಕಾರ ರದ್ದು ಮಾಡಿದೆ.
ಇತ್ತೀಚೆಗೆ ರಾಜ್ಯಾದ್ಯಾಂತ ನಡೆದ ಆದಾಯ ತೆರಿಗೆ (ಐಟಿ) ದಾಳಿಯಲ್ಲಿ ೧೦೦ ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗಿದ್ದು, ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ವರ್ಗಾವಣೆ ದಂಧೆ ಮುಂದುವರೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಾಯಕತ್ವ ಬಣಗಳ ಜಗ್ಗಾಟ ತಾರಕಕ್ಕೇರಿದೆ.
ಕಾವೇರಿ ಜಲ ನ್ಯಾಯಮಂಡಳಿ ಮುಂದೆ ರಾಜ್ಯದ ಜಲಸಂಕಷ್ಟವನ್ನು ಸಮರ್ಥವಾಗಿ ಮಂಡಿಸಲು ವಿಫಲವಾಗಿ, ಕಳೆದ ಎರಡು ತಿಂಗಳಿನಿಂದ ತಮಿಳುನಾಡಿಗೆ ನಿರಂತರ ನೀರು ಹರಿಸಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ.
ಸಂಪನ್ಮೂಲಗಳ ಒತ್ತಡದಲ್ಲಿರುವ ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.