ದೃಢಪಡಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ನೆರೆಯ ಕೇರಳ ರಾಜ್ಯವನ್ನು ನಡುಗಿಸುತ್ತಿರುವ ಝೈಕಾ ವೈರಸ್ ಇದೀಗ ಕರ್ನಾಟಕಕ್ಕೂ ಪ್ರವೇಶಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದ ಚಿಕ್ಕಬಳ್ಳಾಪುರ ಜಿಲ್ಲೆಯ ಐದು ಗ್ರಾಮಗಳ ಸೊಳ್ಳೆಗಳಲ್ಲಿ ಈ ವೈರಸ್ ಪತ್ತೆಯಾಗಿದೆ.
ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಬೆಟ್ಟದ ಸೊಳ್ಳೆಗಳಲ್ಲಿ ಈ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯ ಸಂದೇಶ ನೀಡಿದೆ. ಮೂವತ್ತು ಗರ್ಭಿಣಿಯರೂ ಸೇರಿದಂತೆ ೩೭ ಮಂದಿಯಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಅವರೆಲ್ಲರ ರಕ್ತದ ಮಾದರಿಯನ್ನು ನಿಮಾನ್ಸ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮನುಷ್ಯರಲ್ಲಿ ಝೈಕಾ ವೈರಸ್ ಹರಡಿದೆಯೇ ಎಂಬುದು ದೃಢವಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಸೊಳ್ಳೆಗಳಲ್ಲಿ ಈ ವೈರಸ್ ಹರಡಿರುವುದನ್ನು ದೃಢಪಡಿಸಿದ್ದು, ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಜೊತೆಗೂಡಿ ಮುನ್ನಚ್ಚರಿಕಾ ಕ್ರಮ ಕೈಗೊಂಡಿವೆ ಎಂದಿದ್ದಾರೆ.
ಸೋಂಕಿತ ಸೊಳ್ಳೆಯು ಕಚ್ಚಿದ ಬಳಿಕ ೨ರಿಂದ ೧೪ ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸುತ್ತವೆ. ಈ ಲಕ್ಷಣಗಳು ಎರಡು ವಾರಗಳ ಕಾಲ ಹಾಗೆ ಇರುತ್ತವೆ. ಜ್ವರ, ದದ್ದು, ಸ್ನಾಯು ಹಾಗೂ ಗಂಟು ನೋವು, ಕಣ್ಣು ನೋವು ಅಥವಾ ಕಣ್ಣು ಕೆಂಪಾಗುವುದು, ತಲೆನೋವು, ಬಳಲಿಕೆ, ಹೊಟ್ಟೆ ನೋವು ಇತ್ಯಾದಿ ಕಂಡು ಬರುತ್ತದೆ.
ವೈರಸ್ ಪೀಡಿತ ಸೊಳ್ಳೆ ಕಡಿತದಿಂದ ಸೋಂಕು ಹರಡುವುದರಿಂದ ವೈರಸ್ ಸೋಂಕು ಪ್ರದೇಶಕ್ಕೆ ಪ್ರಯಾಣವನ್ನು ಆದಷ್ಟು ತಡೆಗಟ್ಟುವುದು ಉತ್ತಮ.
ಗರ್ಭಿಣಿಯರಲ್ಲಿ ಈ ವೈರಸ್ ಕಂಡುಬಂದರೆ ಭ್ರೂಣದಲ್ಲಿರುವ ಮಗುವಿನಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.