೮ ಬಿಜೆಪಿ ಶಾಸಕರು ನವೆಂಬರ್ ೧೦ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ?
ಬೆಂಗಳೂರು: ಆಪರೇಷನ್ ಕಮಲಕ್ಕೂ ಮುನ್ನವೇ ಆಪರೇಷನ್ ಹಸ್ತ ಮಾಡಲು ಕಾಂಗ್ರೆಸ್ ಮುಂದಾಗಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ ಬೆನ್ನಲ್ಲೇ ಆಪರೇಷನ್ ಹಸ್ತ ಚುರುಕುಗೊಂಡಿದೆ.
ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಸೇರಿದಂತೆ ೮ ಬಿಜೆಪಿ ಶಾಸಕರು ನವೆಂಬರ್ ೧೦ರಂದು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ೨೦ಕ್ಕೂ ಹೆಚ್ಚು ಸ್ಥಾನವನ್ನು ಕರ್ನಾಟಕದಿಂದ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಳ್ಳಲು ಬಿಜೆಪಿ ಶಾಸಕರು ಮತ್ತು ಮುಖಂಡರನ್ನು ಸೆಳೆದುಕೊಳ್ಳುತ್ತಿದೆ.
ಚುನಾವಣೆಯಲ್ಲಿ ಹೆಚ್ಚು ಮತಗಳಿಕೆ ತಂತ್ರ ಒಂದೆಡೆಯಾದರೆ ಮತ್ತೊಂದೆಡೆ ಆಪರೇಷನ್ ಕಮಲದಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಹಿನ್ನಡೆಯಾಗಬಾರದೆಂಬ ಉದ್ದೇಶದಿಂದ ಪ್ರತಿಪಕ್ಷಗಳ ಸಂಖ್ಯಾಬಲವನ್ನು ಕುಗ್ಗಿಸುವ ಯತ್ನವೂ ಇದಾಗಿದೆ.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ ಅಂದಿನ ಕಾಂಗ್ರೆಸ್ ಶಾಸಕರೇ ಇಂದು ಬಿಜೆಪಿಯಿಂದ ಆಪರೇಷನ್ ಹಸ್ತಕ್ಕೆ ಒಳಗಾಗುತ್ತಿದ್ದಾರೆ.
ಶಾಸಕರ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಪರಾಭವಗೊಂಡ ಜೆಡಿಎಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳನ್ನು ಸೆಳೆದು ಮತ ಪ್ರಮಾಣ ಹೆಚ್ಚಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.
ತಮ್ಮ ಪಕ್ಷದ ಆಡಳಿತವಿರುವ ಸರ್ಕಾರದಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ನಿನ್ನೆ ದಿಢೀರನೆ ಬೆಂಗಳೂರಿಗೆ ಧಾವಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದರು.
ಈ ಸಂದರ್ಭದಲ್ಲೇ ಪಕ್ಷ ಮತ್ತು ಸರ್ಕಾರವನ್ನು ಮತ್ತಷ್ಟು ಬಲಗೊಳಿಸಿಕೊಳ್ಳಲು ಪಕ್ಷದ ಸಿದ್ಧಾಂತಗಳಿಗೆ ಒಪ್ಪಿ ಬಿಜೆಪಿ-ಜೆಡಿಎಸ್ ತೊರೆದು ಬರುವ ಶಾಸಕರು ಮತ್ತು ಮುಖಂಡರನ್ನು ಸೇರಿಸಿಕೊಳ್ಳಲು ಸಭೆಯಲ್ಲೇ ಎಐಸಿಸಿ ಮುಖಂಡರು ಹಸಿರು ನಿಶಾನೆ ತೋರಿದ್ದಾರೆ.
ವರಿಷ್ಠರ ಅನುಮತಿ ದೊರೆಯುತ್ತಿದ್ದಂತೆ ಆಪರೇಷನ್ ಹಸ್ತಕ್ಕೆ ಅತ್ಯಂತ ಗೌಪ್ಯವಾಗಿ ಶಾಸಕರನ್ನು ಸೆಳೆಯುವ ಕಾರ್ಯ ಆರಂಭವಾಗಿದೆ.