ಬೆಂಗಳೂರು:ಕಾಂತರಾಜ್ ವರದಿಯನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ವರಿಷ್ಠರು ತಂತ್ರಗಾರಿಕೆಯ ಬಲೆ ಎಣೆದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ವರದಿಗೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಬೆಂಬಲ ಸೂಚಿಸಿರುವ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ಇಂತಹ ವರದಿಗಳಿಗೆ ವಿರೋಧ ವ್ಯಕ್ತಪಡಿಸಿದೆ.
ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿ (ಕಾಂತರಾಜ್ ವರದಿ) ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ.
ಜಾತಿಗಣತಿ ಇಕ್ಕಟ್ಟಿಗೆ ರಾಜ್ಯ ಸರ್ಕಾರ ಸಿಲುಕಿಸಲು ಬಿಜೆಪಿ ತಂತ್ರ
ಇದರ ಬೆನ್ನಲ್ಲೇ ಕಾಂತರಾಜ್ ವರದಿಯ ಪರ ಮತ್ತು ವಿರೋಧದ ಚರ್ಚೆ ತಾರಕಕ್ಕೇರಿದ್ದು, ಈ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ರಾಜಕೀಯ ಸಂಘರ್ಷಕ್ಕೆ ಅಸ್ತ್ರವಾಗಿದೆ.
ಜಾತಿ ಗಣತಿ ವರದಿ ವಿಚಾರದಲ್ಲಿ ಮುಖ್ಯಮಂತ್ರಿ ತೆಗೆದುಕೊಳ್ಳುವ ನಿರ್ಧಾರದಿಂದ ಅವರಿಗೇ ಮುಳುವಾಗಿಸಲು ಬಿಜೆಪಿ ನಿನ್ನೆ ದೆಹಲಿಯಲ್ಲಿ ಕಾರ್ಯತಂತ್ರ ರೂಪಿಸಿದೆ.
ಕರ್ನಾಟಕದ ಹಿಂದುಳಿದ ವರ್ಗಕ್ಕೆ ಸೇರಿದ ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿಜೆಪಿಯ ಪ್ರಮುಖರನ್ನು ನಿನ್ನೆ ದೆಹಲಿಗೆ ಕರೆಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡಾ, ರಾಜ್ಯ ನಾಯಕರೊಂದಿಗೆ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿ ವರದಿಯನ್ನು ವಿರೋಧಿಸುವಂತೆ ಆದೇಶ ಮಾಡಿ ಕಳುಹಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದ ಸಮಯದಲ್ಲೇ ರಾಜ್ಯ ಒಕ್ಕಲಿಗರ ಸಂಘದವರು ಬೆಂಗಳೂರಿನಲ್ಲಿ ತಮ್ಮ ಸಮುದಾಯದ ಮಠಾಧೀಶರ ಸಮ್ಮುಖದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಕಾಂತರಾಜ್ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ: ಈಶ್ವರಪ್ಪ ಭವಿಷ್ಯ
ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂತರಾಜ್ ವರದಿ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ವರದಿಯನ್ನು ಬೆಂಕಿಗೆ ಹಾಕಿ ಅದನ್ನು ಒಪ್ಪಲು ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿ ಅವರಿಗೆ ಕಿವಿಮಾತು ಹೇಳುತ್ತೇನೆ, ಜಾತಿ-ಜಾತಿ ನಡುವೆ ಸಂಘರ್ಷ ಹುಟ್ಟುಹಾಕುವ ಇಂತಹ ವರದಿಗೆ ಆಸ್ಪದ ಕೊಡಬೇಡಿ.
ಕಳೆದ ೮ ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ಸಿದ್ಧಗೊಂಡಿರುವ ವರದಿಗೆ ಕಾರ್ಯದರ್ಶಿಗಳ ಸಹಿಯೇ ಇಲ್ಲ, ಅಂತಹ ಸಮೀಕ್ಷೆಯನ್ನು ಒಪ್ಪಲು ಸಾಧ್ಯವಿಲ್ಲ. ನಾನೂ ಹಿಂದುಳಿದ ವರ್ಗಕ್ಕೆ ಸೇರಿದವನೇ, ಈ ವರದಿಯಿಂದ ಯಾವ ವರ್ಗಕ್ಕೂ ಲಾಭವಾಗುವುದಿಲ್ಲ. ಅಪ್ಪ-ಅಮ್ಮ ಇಲ್ಲದ ಕೂಸನ್ನು ಬೀದಿಗೆ ತಂದು ಬೆಂಕಿ ಹಚ್ಚಬೇಡಿ, ಅದರ ಬದಲು ವರದಿಯನ್ನೇ ಸುಟ್ಟುಹಾಕಿ ಎಂದು ಖಾರವಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಛಾಂಪಿಯನ್ ಎಂದು ಬಿಂಬಿಸಿಕೊಳ್ಳಲು ಅವೈಜ್ಞಾನಿಕ ವರದಿಗೆ ಜೀವ ತುಂಬಲು ಹೊರಟಿದ್ದಾರೆ. ಈ ವರದಿಗೆ ಒಕ್ಕಲಿಗ ಮತ್ತು ವೀರಶೈವ ಸಮುದಾಯದ ಸಂಘಟನೆಗಳು ಮತ್ತು ಮುಖಂಡರು ಈಗಾಗಲೇ ವಿರೋಧ ವ್ಯಕ್ತಪಡಿಸಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದೆಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಪ್ರಮುಖ ಸಮುದಾಯಗಳ ವಿರೋಧ ವ್ಯಕ್ತಪಡಿಸಿರುವುದನ್ನೇ ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಹೊರಟಿದ್ದು, ಕಾಂತರಾಜ್ ವರದಿಯನ್ನೇ ನೇರವಾಗಿ ವಿರೋಧ ವ್ಯಕ್ತಪಡಿಸಿದೆ.
ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂತರಾಜ್ ವರದಿಯ ಪರ ಮತ್ತು ವಿರೋಧದ ಚರ್ಚೆ ತಾರಕಕ್ಕೇರಿದೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಪ್ರತಿಷ್ಠೆಯ ವಿಚಾರ. ರಾಜಕೀಯ ಸಂಘರ್ಷಕ್ಕೆಕ್ಕೆ ಇದೇ ಪ್ರಮುಖ ಅಸ್ತ್ರ, ವರದಿ ಸ್ವೀಕಾರಕ್ಕೂ ಮುನ್ನವೇ ಲಾಭ-ನಷ್ಟದ ಲೆಕ್ಕಾಚಾರ ಜೋರಾಗಿದೆ.
ಇದಕ್ಕೂ ಮೊದಲು ವರದಿ ಅನುಷ್ಠಾನಗೊಳಿಸುವಂತೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಪಿ.ಸಿ ಮೋಹನ್ ಎಲ್ಲರೂ ಒತ್ತಾಯಿಸಿದ್ದರು. ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಿಂದ ಹಿಂದಿರುಗುತ್ತಿದ್ದಂತೆ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಬಹುಸಂಖ್ಯಾತರ ವಿರುದ್ಧವಾಗಿ ವರದಿ ಸ್ವೀಕರಿದ್ದೇ ಆದರೆ, ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಮತ್ತು ಸರ್ಕಾರ ಪತನಗೊಳಿಸಲು ಸಮುದಾಯಗಳು ಒಂದಾಗಿ ಸಂಘರ್ಷಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.