ಗದಗ: ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ, ಕರ್ನಾಟಕದ ಇತಿಹಾಸ ತಿಳಿಸುವ ಉದ್ದೇಶದಿಂದ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಗದಗದಲ್ಲಿ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಅವರ ನೇತೃತ್ವದಲ್ಲಿ ಕರ್ನಾಟಕ ಎಂಬುದಾಗಿ ಮರುನಾಮಕರಣವಾದ ನಂತರ ಐತಿಹಾಸಿಕ ಕಾರ್ಯಕ್ರಮ ಇದೇ ಭಾಗದಲ್ಲಿ ನಡೆದಿತ್ತು. ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಜನಸೇವೆ ಮಾಡಲು ಅವಕಾಶ ಸಿಕ್ಕಿದೆ
ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿದ ಪವಿತ್ರವಾದ ಹೊತ್ತಿನಲ್ಲೇ, ಕಾಂಗ್ರೆಸ್ ಸರ್ಕಾರಕ್ಕೆ ಜನಸೇವೆ ಮಾಡಲು ಅವಕಾಶ ನೀಡಿದ ಕರ್ನಾಟಕ ಜನತೆಯ ತೀರ್ಮಾನಕ್ಕೆ ಚಿರಋಣಿಯಾಗಿರುತ್ತೇವೆ.
ಕರ್ನಾಟಕ ಎನ್ನುವುದೇ ಶಕ್ತಿ ಮಂತ್ರ, ಕರ್ನಾಟಕ ಎನ್ನುವುದು ಶಾಂತಿ ಮಂತ್ರ, ಕರ್ನಾಟಕ ಎಂದರೆ ಮಾದರಿ ಆಡಳಿತ ಯಂತ್ರ, ಕರ್ನಾಟಕ ಎಂದರೆ ಸರ್ವ ಜನಾಂಗದ ಶಾಂತಿಯ ತೋಟ, ಇಡೀ ಕರ್ನಾಟಕವೇ ಒಂದು ಅನುಭವ ಮಂಟಪ, ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ.
ಶುದ್ದ ಕುಡಿಯುವ ನೀರಿನ ಘಟಕಗಳ ಕ್ರಾಂತಿ
ಸಾರ್ ಅಹಮದ್ ಅವರ ಕವಿತೆಯ ಆಶಯದಂತೆ ಭಾಷೆ, ಸಂಸ್ಕೃತಿ, ಇತಿಹಾಸ, ಜನಸಾಮಾನ್ಯರನ್ನ ಗಮನದಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದೇವೆ ಎಂದು ಭಾಷಣದ ಮಧ್ಯೆ ಕವನವೊಂದನ್ನು ಉಲ್ಲೇಖಿಸಿದರು.
ಸುಮಾರು 20 ವರ್ಷಗಳ ಹಿಂದೆ ಗದಗ ಜಿಲ್ಲೆಗೆ ನಾನು ಭೇಟಿ ನೀಡಿದಾಗ ಈ ರೀತಿ ಇರಲಿಲ್ಲ, ಇಂದು ಜಿಲ್ಲೆ ಚಿಕ್ಕದಾದರೂ ಅಭಿವೃದ್ದಿಯ ಪಥದಲ್ಲಿ ಉತ್ತುಂಗಕ್ಕೆ ಏರಿದೆ. ಎಚ್.ಕೆ.ಪಾಟೀಲರು ಸ್ಥಾಪನೆ ಮಾಡಿದ್ದಂತಹ ಶುದ್ದ ಕುಡಿಯುವ ನೀರಿನ ಘಟಕಗಳ ಕ್ರಾಂತಿಯಿಂದ ಉತ್ತೇಜಿತನಾಗಿ, ನನ್ನ ಕ್ಷೇತ್ರದಲ್ಲಿ ಸುಮಾರು 400ಕ್ಕೂ ಹೆಚ್ಚು ಘಟಕಗಳನ್ನು ಸ್ಥಾಪನೆ ಮಾಡಿಸಿ, ಅವರಿಂದಲೇ ಉದ್ಘಾಟನೆ ಮಾಡಿಸಿದ್ದೆ. ಆ ನಂತರ 2013 ರಲ್ಲಿ ರಾಜ್ಯ ಸರ್ಕಾರದ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿ ರೂಪುಗೊಂಡಿದ್ದು ಇತಿಹಾಸ. ಇದಕ್ಕೆ ಸ್ಪೂರ್ತಿಯಾಗಿದ್ದು ಗದಗ ಜಿಲ್ಲೆ ಎಂದು ಹೇಳಿದರು.
ಪ್ರತಿ ಊರಿನಲ್ಲೂ ಶಾಲೆ, ಆಸ್ಪತ್ರೆ, ಸಹಕಾರಿ ಸಂಘ ಇರಬೇಕು ಎಂಬುದು ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಗದಗ ಜಿಲ್ಲೆಯಲ್ಲಿ ಗಾಂಧಿ ಅವರು ಕಂಡ ಕನಸು ನನಸಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸಬರಮತಿ ಆಶ್ರಮ ಸ್ಥಾಪನೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳ ಕಚೇರಿ ವಿಧಾನಸೌಧವನ್ನು ನೆನಪಿಸುವಂತಿದೆ, ಬೃಹತ್ ಹನಿ ನೀರಾವರಿ ಯೋಜನೆಗಳನ್ನು ತಂದು ಎಚ್.ಕೆ.ಪಾಟೀಲರು ಅಭಿವೃದ್ದಿಯಲ್ಲಿ ಮಾದರಿಯಾಗಿದ್ದಾರೆ ಎಂದು ಶ್ಲಾಘಸಿದರು.
ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಕರ್ನಾಟಕ ಮಾಡೆಲ್ ಅನ್ನು ಪರಿಚಯಿಸಿ, ರಾಷ್ಟ್ರಕ್ಕೆ ಅಭಿವೃದ್ದಿಯ ಸಂದೇಶ ನೀಡಿದೆ. ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಸಂಘಟಿರಾಗಿರುವ ಗದಗದ ಜನತೆ ಜಾತಿ, ಧರ್ಮ ಎಲ್ಲವನ್ನು ಮರೆತು ಕರ್ನಾಟಕ- 50 ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದ್ದೀರಿ ಎಂದರು.
