ಬೆಂಗಳೂರು: ಅಮೆರಿಕದ ಮಾಂಟ್ಗೊಮೆರಿ ಪ್ರಾಂತ್ಯದಿಂದ ಆಗಮಿಸಿರುವ ೩೦ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಬಂಡವಾಳ ಹೂಡಿಕೆ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಅವರ ನೇತೃತ್ವದಲ್ಲಿ ರಾಜ್ಯ ಸಚಿವರ ತಂಡವು ಶುಕ್ರವಾರ ರಾತ್ರಿ ಇಲ್ಲಿ ಮಹತ್ತ್ವದ ಮಾತುಕತೆ ನಡೆಸಿತು.
ಸಚಿವರ ನಿಯೋಗದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಅವರಿದ್ದರು. ಅಮೆರಿಕದ ಉದ್ಯಮಿಗಳ ನಿಯೋಗದ ನೇತೃತ್ವವನ್ನು ಮಾಂಟ್ಗೊಮೆರಿ ಪ್ರಾಂತ್ಯದ ಆಡಳಿತ ಮುಖ್ಯಸ್ಥ ಎಲ್ರಿಚ್ ಮಾರ್ಕ್ ವಹಿಸಿದ್ದರು. ನಗರದ ಪಂಚತಾರಾ ಹೋಟೆಲ್‌ನಲ್ಲಿ ಸಭೆ ನಡೆಯಿತು.
ಎಂ. ಬಿ. ಪಾಟೀಲ ಅವರು ಅಮೆರಿಕದ ಕಂಪನಿಗಳಿಂದ ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಇತ್ತೀಚೆಗೆ ಆ ದೇಶಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ಅಮೆರಿಕ-ಭಾರತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೌನ್ಸಿಲ್ ಜತೆಗೂ ವಿಚಾರ ವಿನಿಮಯ ನಡೆಸಿದ್ದರು. ಜೊತೆಗೆ, ರಾಜ್ಯದಲ್ಲಿರುವ ಹೂಡಿಕೆ, ರಫ್ತು, ಉತ್ತೇಜನಾ ನೀತಿಗಳನ್ನು ಅರಿಯಲು ಕರ್ನಾಟಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಎಂ. ಬಿ. ಪಾಟೀಲ, ರಾಜ್ಯದಲ್ಲಿ ಅಮೆರಿಕದ ಎರಡು ಸಾವಿರಕ್ಕೂ ಹೆಚ್ಚು ಕಂಪನಿಗಳಿದ್ದು, ೨೦೨೫ರ ಹೊತ್ತಿಗೆ ಇವುಗಳ ವಾರ್ಷಿಕ ವಹಿವಾಟು ೨೩೦ ಬಿಲಿಯನ್ ಡಾಲರ್ ಮೀರುವ ನಿರೀಕ್ಷೆ ಇದೆ. ಈ ಕಂಪನಿಗಳು ೧೩ ಲಕ್ಷ ಜನರಿಗೆ ಉದ್ಯೋಗ ನೀಡಿದ್ದು, ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ಅಮೆರಿಕದ ವಾಣಿಜ್ಯ ವಹಿವಾಟು ಏಳು ಪಟ್ಟಿಗಿಂತ ಹೆಚ್ಚು ಬೆಳೆದಿದೆ. ಮುಂಬರುವ ದಿನಗಳಲ್ಲಿ ಅಮೆರಿಕದ ಕಂಪನಿಗಳ ಹೂಡಿಕೆ ರಾಜ್ಯದಲ್ಲಿ ಮತ್ತಷ್ಟು ಹೆಚ್ಚಬೇಕು ಎಂದು ಆಹ್ವಾನಿಸಿದರು.
ರಾಜ್ಯದಲ್ಲಿ ಹೂಡಿಕೆಗೆ ಪ್ರಶಸ್ತ ವಾತಾವರಣವಿದ್ದು, ಐಟಿ-ಬಿಟಿ, ಆರೋಗ್ಯ, ಶಿಕ್ಷಣ ವಿದ್ಯುನ್ಮಾನ, ವಿದ್ಯುತ್ ಚಾಲಿತ ವಾಹನ ತಯಾರಿಕೆ, ಸೆಮಿ ಕಂಡಕ್ಟರ್, ಹಸಿರು ಇಂಧನ, ನವೋದ್ಯಮ, ಡಾಟಾ ಸೈನ್ಸ್, ವೈಮಾಂತರಿಕ್ಷ ಮತ್ತು ರಕ್ಷಣೆ ಮುಂತಾದ ವಿಭಾಗಗಳಲ್ಲಿ ಅತ್ಯುತ್ತಮ ನೀತಿಗಳನ್ನು ಹೊಂದಿದೆ.
ವಿದೇಶಿ ನೇರ ಹೂಡಿಕೆ, ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆಗಳಲ್ಲಿ ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಅಮೆರಿಕದ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಎಲ್ಲ ಅನುಕೂಲಗಳನ್ನೂ ರಾಜ್ಯ ಸರಕಾರವು ತ್ವರಿತವಾಗಿ ಒದಗಿಸಿ ಕೊಡಲಿದೆ ಎಂದು ಅವರು ಭರವಸೆ ನೀಡಿದರು.ಕರ್ನಾಟಕವು ಹಿಂದಿನಿಂದಲೂ ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆ ಸ್ನೇಹಿ ರಾಜ್ಯವಾಗಿದ್ದು, ನಮ್ಮ ಜಿಡಿಪಿ ೨೮೦ ಬಿಲಿಯನ್ ಡಾಲರುಗಳಷ್ಟಿದೆ. ಜೊತೆಗೆ ರಫ್ತು ವಹಿವಾಟಿನಲ್ಲೂ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದ್ದೇವೆ. ಅಲ್ಲದೆ, ಬೆಂಗಳೂರು ನಗರವು ಉದ್ಯಮಗಳ ದೃಷ್ಟಿಯಿಂದ ಜಾಗತಿಕ ಮಟ್ಟದ ಅಗ್ರ ೨೫ ನಗರಗಳಲ್ಲಿ ಒಂದಾಗಿದೆ ಎಂದು ಸಚಿವರು ನಿಯೋಗಕ್ಕೆ ವಿವರಿಸಿದರು.
ಅಮೆರಿಕ ವಿವಿ ಜೊತೆಗೆ ಸಹಭಾಗಿತ್ವ
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಮಾತನಾಡಿ, ಐಟಿ ಕ್ಷೇತ್ರದಲ್ಲಿ ಇವತ್ತು ಕರ್ನಾಟಕ ಮುಂಚೂಣಿಯಲ್ಲಿ ಇರುವುದಕ್ಕೆ ಪ್ರಮುಖ ಕಾರಣವೇ ಉನ್ನತ ಶಿಕ್ಷಣ ಇಲಾಖೆ. ಅಮೆರಿಕದ ಮಾಂಟಗೊಮೇರಿ ಸೇರಿದಂತೆ ಇತರ ವಿವಿಗಳ ಜತೆಗೂ ಸಹಭಾಗಿತ್ವ ಸಾಧಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದರು.
ಇದಲ್ಲದೆ ರಾಜ್ಯದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿವೆ. ಉದ್ಯಮ ವಲಯವು ಇವುಗಳೊಂದಿಗೆ ಸಹಭಾಗಿತ್ವ ಹೊಂದಿದ್ದು, ಈ ವಲಯಕ್ಕೆ ಬೇಕಾಗುವ ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುವ ಸಾಮರ್ಥ್ಯವಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ೪೦೦ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ಆರ್ ಮತ್ತು ಡಿ ಕೇಂದ್ರಗಳು ಸಕ್ರಿಯವಾಗಿವೆ. ಇವುಗಳ ಲಾಭವನ್ನು ಅಮೆರಿಕದ ಕಂಪನಿಗಳು ಪಡೆದುಕೊಳ್ಳಬೇಕು ಎಂದು ಸುಧಾಕರ್ ನುಡಿದರು.
ಮಾಂಟಗೋಮೇರಿ ಜೊತೆ ಕೆಲಸ ಮಾಡಲು ಕರ್ನಾಟಕ ಉತ್ಸುಕ
ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಮಾಂಟಗೊಮೇರಿ ಒಳ್ಳೆಯ ಕೆಲಸ ಮಾಡುತ್ತಿದ್ದು, ರಾಜ್ಯವೂ ಅದರ ಜತೆ ಕೆಲಸ ಮಾಡಲು ಉತ್ಸುಕವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರಾದ ಸುಧಾಕರ ಮತ್ತು ದಿನೇಶ ಗುಂಡೂರಾವ್ ಅವರಿಗೆ ಮಾಂಟಗೊಮೇರಿ ಕೌಂಟಿ ಸರ್ಕಾರದ ಮೆಡಲ್ ನೀಡಿ ನಿಯೋಗ ಗೌರವಿಸಿತು.
ಅಮೆರಿಕದ ನಿಯೋಗದಲ್ಲಿ ಮಾಂಟ್ಗೊಮೆರಿ ಕೌಂಟಿ ಕೌನ್ಸಿಲ್ ಅಧ್ಯಕ್ಷ ಇವಾನ್ ಗ್ಲಾಸ್, ಅಲ್ಲಿನ ಆರ್ಥಿಕ ಅಭಿವೃದ್ಧಿ ನಿಗಮದ ಸಿಇಒ ಟಾಂಪ್ಕಿನ್ಸ್ ಬಿಲ್, ವಿಶೇಷ ಯೋಜನಾ ವ್ಯವಸ್ಥಾಪಕ ಕಾಸ್ಟೆಲ್ಲೋ ಜೂಡಿ, ಲಾ ಮ್ನಾಗ್ನೋಲಿಯಾ ಕಂಪನಿಯ ಸಂಸ್ಥಾಪಕ ಕೂಂಬಾ ಗ್ರೇವ್ಸ್, ಟಾಂಜನೈಟ್ ಫ್ರೈಟ್ ಮತ್ತು ಲಾಜಿಸ್ಟಿಕ್ಸ್ ಸಿಇಒ ಮ್ಯಾಕ್ನೆಸ್ಟರ್ ಎಕ್ಸವೆರಿ ಮುಂತಾದವರು ಉಪಸ್ಥಿತರಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸ್ವಾಗತಿಸಿದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಅವರು ಪ್ರಾತ್ಯಕ್ಷಿಕೆ ಮೂಲಕ ಕರ್ನಾಟಕವು ಹೂಡಿಕೆಗೆ ಹೇಗೆ ಪೂರಕವಾಗಿದೆ ಎಂಬುದನ್ನು ವಿವರಿಸಿದರು.
22
previous post