ಬೆಂಗಳೂರು:ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕುರುಬರ ಹಳ್ಳಿಯ ನಾಡಪ್ರಭು ಕೆಂಪೇಗೌಡ ಕ್ರೀಡಾಂಗಣದಲ್ಲಿ ಇಂದು ಆಶಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಾರ್ಷಿಕ ಕ್ರೀಡಾಕೂಟ ಹಾಗೂ ಮ್ಯಾರಥಾನ್ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ. ಗೋಪಾಲಯ್ಯ ಪಾಲ್ಗೊಂಡು ಕ್ರೀಡಾಕೂಟ ಉದ್ಘಾಟನೆ ಮಾಡಿ ಮ್ಯಾರಥಾನ್ ನಡಿಗೆ ಜಾಥಾಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಗೋಪಾಲಯ್ಯ, ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಪ್ರತಿಭೆ ಹಾಗೂ ಬುದ್ಧಿವಂತಿಕೆ ಇರಲಿದ್ದು, ಯಾರು ಕೂಡ ಪೋಷಕರು ಎದೆಗುಂದಬಾರದು, ಏಷ್ಟೋ ಜನಕ್ಕೆ ಮಕ್ಕಳೇ ಇರುವುದಿಲ್ಲ, ದೇವರ ಮೊರೆ ಹೋಗಿ ಮಕ್ಕಳನ್ನು ಕರುಣಿಸು ಎಂದು ಬೇಡುತ್ತಾರೆ.
ಯಾವುದೇ ನೂನ್ಯತೆ ಇಲ್ಲದೇ ಎಲ್ಲಾ ರೀತಿಯಲ್ಲೂ ಚೆನ್ನಾಗಿರುವ ಮಕ್ಕಳಿಗೆ ಚಂಚಲತೆ ಇರುತ್ತದೆ. ಆದರೆ, ವಿಶೇಷ ಚೇತನ ಮಕ್ಕಳಿಗೆ ಯಾವುದೇ ರೀತಿಯ ಚಂಚಲತೆ ಇಲ್ಲದ ಕಾರಣ ವಿಶೇಷ ಪ್ರತಿಭೆ ಹಾಗೂ ಜಾಣ ತಲೆ ಇರುತ್ತದೆ.
ನಮ್ಮ ಕ್ಷೇತ್ರದಲ್ಲಿ ಕೂಡ ವಿಕಲಚೇತನರಿಗೆ ಎಲ್ಲ ರೀತಿಯ ತ್ರಿಚಕ್ರ ವಾಹನ, ಆರೋಗ್ಯ ಶಿಬಿರ ಏರ್ಪಡಿಸಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಔಷಧಿ, ವಾಕಿಂಗ್ ಸ್ಟಿಕ್, ಕೃತಕ ಕಾಲು ಜೋಡಣೆ ಸೇರಿದಂತೆ ಹಲವು ರೀತಿಯ ಅವಶ್ಯಕ ವಸ್ತುಗಳನ್ನು ನೀಡುವ ಮೂಲಕ ಸಮಾಜದಲ್ಲಿ ಎಲ್ಲರಂತೆ ಬದುಕು ಕಟ್ಟಿಕೊಳ್ಳಲು ನೆರವು ನೀಡಿದ್ದೇವೆ.
ಮಕ್ಕಳ ಮಾನಸಿಕ ಹಾಗೂ ದೈಹಿಕ ಸಮತೋಲನದ ಬೆಳವಣಿಗೆಗೆ ಈ ರೀತಿ ಕ್ರೀಡೆಗಳು ಅಗತ್ಯ, ನಾನು ಪ್ರತಿ ವರ್ಷ ವಿಶೇಷ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ವ್ಯಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡುತ್ತಿರುವುದಾಗಿ ಹೇಳಿದರು.
ಕಾರ್ಯಕ್ರಮ ಸಂಘಟಿಸಿದ ಆಶಾ ಚಾರಿಟೇಬಲ್ ಟ್ರಸ್ಟ್‌ಗೆ ಅಭಿನಂದನೆಗಳು ಎಂದು ಶುಭ ಹಾರೈಸಿದರು.
19