5 ವರ್ಷಗಳಲ್ಲಿ ಎಷ್ಟು ಸಿಎಂಗಳು ಆಗುತ್ತಾರೋ ಗೊತ್ತಿಲ್ಲ: ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ದುಸ್ಥಿತಿ ನೋಡಿದರೆ ಐದು ವರ್ಷದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಾಗುತ್ತಾರೋ ಗೊತ್ತಿಲ್ಲ. ಸದ್ಯದ ಸ್ಥಿತಿಯನ್ನು ನೋಡಿದರೆ ಈ ಸರ್ಕಾರವನ್ನು ಟಿಸಿಎಂ (ಟೆಂಪರರಿ ಮುಖ್ಯಮಂತ್ರಿ) ಹಾಗೂ ಡಿಸಿಎಂ (ಡೂಪ್ಲಿಕೇಟ್ ಮುಖ್ಯಮಂತ್ರಿ ) ಸರ್ಕಾರವೆಂದು ಕರೆಯಬಹುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸುವ ಸಂಬಂಧ ಕರೆದಿದ್ದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಬರಕ್ಕೆ ಸಿಲುಕಿ ಇನ್ನಿಲ್ಲದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ತಮ್ಮ ಕಣ್ಮುಂದೆಯೇ ಫಸಲು ಬಿಸಲಿನಲ್ಲಿ ಬೆಂದು ಹೋಗುತ್ತಿದ್ದರೆ ಕಣ್ಣೀರು ಹಾಕುತ್ತಿದ್ದಾರೆ. ಇಂತಹ ವೇಳೆಯಲ್ಲಿ ಒಬ್ಬರೇನೋ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿ ಆಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಉಳಿದವರು ಅನೇಕರು ʼನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿʼ ಎಂದು ಹಾದಿ-ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಇದೆಲ್ಲಾ ನೋಡಿದರೆ ಈ ಸರ್ಕಾರವನ್ನು ಟಿಸಿಎಂ ಹಾಗೂ ಡಿಸಿಎಂ ಸರ್ಕಾರವೆಂದು ಕರೆಯದೆ ಇನ್ನೇನೆಂದು ಕರೆಯಬೇಕು ಎಂದು ಲೇವಡಿ ಮಾಡಿದರು.
ಯಾರಿಗೂ ಗ್ಯಾರಂಟಿ ಇಲ್ಲದ ಈ ಸರ್ಕಾರದಲ್ಲಿ ಐದು ವರ್ಷದಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳಾಗುತ್ತಾರೋ ಗೊತ್ತಿಲ್ಲ. ಆದರೆ, ೧೩೬ ಶಾಸಕರು ಇರುವ ಈ ಸರ್ಕಾರಕ್ಕೆ ಕೇವಲ ಐದೇ ತಿಂಗಳಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದೆ. ಅದಕ್ಕಾಗಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಶಾಸಕರ ಮನೆಗಳ ಮುಂದೆ ಕೈಕಟ್ಟಿಕೊಂಡು ಕಾಂಗ್ರೆಸ್ ನವರು ನಿಲ್ಲುತ್ತಿದ್ದಾರೆ. “ಸರ್ ನೀವು ಬನ್ನಿ, ಅಕ್ಕ ನೀವು ಬನ್ನಿ” ಎಂದು ಗೋಗರೆಯುತ್ತಿದ್ದಾರೆ ಎಂದು ಕುಟುವಾಗಿ ಟೀಕಿಸಿದರು.
ನೀವು ಮುಖ್ಯಮಂತ್ರಿ ಆಗುತ್ತೀರಾ? 19 ಶಾಸಕರ ಬೆಂಬಲ ಕೊಡುತ್ತೇನೆ
ತಮ್ಮ ಮಾತಿನ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತೀವ್ರವಾಗಿ ಚಾಟಿ ಬೀಸಿದ ಕುಮಾರಸ್ವಾಮಿ, “ನೀವು ಮುಖ್ಯಮಂತ್ರಿ ಆಗುತ್ತೀರಾ ಹೇಳಿ. ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಪಕ್ಷದ 19 ಶಾಸಕರ ಬೆಂಬಲವನ್ನೂ ಕೊಡುತ್ತೇವೆ” ಎಂದು ಡಿಕೆಶಿ ಅವರಿಗೆ ಓಪನ್ ಆಫರ್ ಕೊಟ್ಟರು.
“ಜಿ.ಟಿ.ದೇವೇಗೌಡರನ್ನು ಮಂತ್ರಿ ಮಾಡುತ್ತೇನೆ. ಅವರ ಮಗನಿಗೆ ಇನ್ನೇನೋ ಮಾಡುತ್ತೇನೆ” ಎಂದು ಆಮಿಷ ಒಡ್ಡುತ್ತಿದ್ದಾರೆ. ಕರೆಮ್ಮ ನಾಯಕ್ ಅವರು ತಮ್ಮ ಕ್ಷೇತ್ರದ ಕೆಲಸಕ್ಕಾಗಿ ಮೀಟಿಂಗ್ ಗೆ ಹೋದರೆ, “ಬನ್ನಿ ಅಕ್ಕ ನಮ್ಮ ಪಕ್ಷಕ್ಕೆ” ಅಂತಾರೆ. ನಮ್ಮ ಶಾಸಕರಿಗೆ ಆಪರೇಷನ್ ಮಾಡುವುದಕ್ಕೆ ಅವರು ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಅವರ (ಕಾಂಗ್ರೆಸ್) ಶಾಸಕರಿಗೆ ಅನುದಾನ ನೀಡುವುದಕ್ಕೆ ಗತಿ ಇಲ್ಲ. ಆದರೆ ಇತರೆ ಪಕ್ಷಗಳ ಶಾಸಕರಿಗೆ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಅವರು ಗುಡುಗಿದರು.
ಸುತ್ತಿ ಬಳಸಿ ಇದೆಲ್ಲಾ ಏಕೆ? ನಾನೇ ನೇರವಾಗಿ ಹೇಳುತ್ತಿದ್ದೇನೆ. ನೀವು ನಾಳೆಯೇ ಮುಖ್ಯಮಂತ್ರಿ ಆಗಿ. ನಮ್ಮ ಅಷ್ಟೂ ಶಾಸಕರ ಬೆಂಬಲವನ್ನು ನಿಮಗೆ ಘೋಷಣೆ ಮಾಡುತ್ತೇನೆ ಎಂದು ಡಿಕೆಶಿ ಅವರಿಗೆ ತಿರುಗೇಟು ಕೊಟ್ಟರು ಕುಮಾರಸ್ವಾಮಿ.
ಜಾಹೀರಾತಿನಲ್ಲಿ ಮಾತ್ರ ಸಿಎಂ, ಡಿಸಿಎಂ ಭದ್ರವಾಗಿ ಕೈ ಕೈ ಹಿಡಿದುಕೊಂಡಿದ್ದಾರೆ. ಭದ್ರವಾಗಿ ಕೈ ಹಿಡಿದುಕೊಳ್ಳಿ, ನಿಮಗೂ ಹೊಸ ಹೆಸರು ಕೊಡಬಹುದು ಎಂದು ಅವರು ಟಾಂಗ್ ಕೊಟ್ಟರು.
ಡಿನ್ನರ್ ಮೀಟಿಂಗ್ ಆಯ್ತು. ಇವಾಗಾ ಬ್ರೇಕ್ ಫಾಸ್ಟ್ ಮೀಟಿಂಗ್. ನಂತರ ಲಂಚ್ ಮೀಟಿಂಗ್.
ಇದೇ ಮಾಡ್ಕೊಂಡು ಇರ್ತೀರೋ ಇಲ್ಲವೇ ಕೆಲಸ ಮಾಡ್ತೀರೋ ಎಂದ ಅವರು, ದಿನಾ ಬೆಳಗ್ಗೆ ಡಂಗುರ ಹೊಡೆಯುತ್ತಾ ಇದ್ದಾರೆ, ಆ ಪಾರ್ಟಿ ಶಾಸಕರು ಬರುತ್ತಾರೆ, ಈ ಪಾರ್ಟಿ ಶಾಸಕರು ಬರುತ್ತಾರೆ ಎಂದು. ತಮ್ಮ ವೈಫಲ್ಯಗಳನ್ನು ಮುಚ್ಚಿ ಜನರ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ನವರು ʼಆಪರೇಷನ್ ಹಸ್ತʼ ಎನ್ನುವ ಗುಮ್ಮವನ್ನು ತೇಲಿಬಿಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.