ನವೆಂಬರ್ 5ರಂದು ಮೋಡ ಬಿತ್ತನೆ
ರಾಯಚೂರು: ರಾಯಚೂರು ಜಿಲ್ಲೆಯನ್ನು ಬರದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪಿ.ಕೆ.ಕೆ ಸಂಸ್ಥೆಯ ಸಹಭಾಗಿತ್ವದಲ್ಲಿ ಭೋಸರಾಜು ಫೌಂಡೇಶನ್ ನಿಂದ ನವೆಂಬರ್ 5 ರಂದು ಮೋಡ ಬಿತ್ತನೆ ಕಾರ್ಯವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಭೋಸರಾಜು ಫೌಂಡೇಷನ್, ರಾಜ್ಯದಲ್ಲಿ ಈ ವರ್ಷ ಮಳೆ ಕಡಿಮೆಯಾಗಿದೆ. ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ರಾಯಚೂರು ಜಿಲ್ಲೆಯೂ ಹೊರತಾಗಿಲ್ಲ.
ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ತುಂಗಭದ್ರಾ ನಾಲೆಗಳಲ್ಲೂ ನೀರಿನ ಪ್ರಮಾಣ ಗಣನೀಯ ಇಳಿಕೆಯಾಗಿದೆ. ಈಗ ಅರ್ಧಕ್ಕೆ ಬೆಳೆದಿರುವ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಮಳೆ ಸುರಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆಯ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ಬರ ಪರಿಸ್ಥಿತಿಯನ್ನು ನಿವಾರಿಸಿ, ನೀರಿನ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆ ಬಹಳ ಪರಿಣಾಮಕಾರಿ. ಅತ್ಯಾಧುನಿಕ ತಂತ್ರಜ್ಞಾನ ಉಪಯೋಗಿಸಿ ನಡೆಸುವ ಮೋಡ ಬಿತ್ತನೆಯು ಮಳೆಯನ್ನು ಸುರಿಸುವಲ್ಲಿ ಯಶಸ್ವಿಯಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಮೋಡ ಬಿತ್ತನೆಯ ಮೂಲಕ ಜಿಲ್ಲೆಯ ರೈತರಿಗೆ ಅನುಕೂಲ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ಹೇಳಿದ್ದಾರೆ.
ಸ್ಥಳೀಯ ಆರ್ಥಿಕತೆಗೆ ಇಂಬು ನೀಡುವ ನಿಟ್ಟಿನಲ್ಲಿ ಕೃಷಿ ಚಟುವಟಿಕೆಗಳ ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ಬೆಳೆಗೆ ಮಳೆ ಬಹಳ ಅವಶ್ಯ. ಇದನ್ನ ಗಮನದಲ್ಲಿಟ್ಟುಕೊಂಡು ಮೋಡ ಬಿತ್ತನೆಯ ಕಾರ್ಯಕ್ಕೆ ಮುಂದಾಗಿದ್ದೇವೆ. ಜಿಲ್ಲೆಯ ಜನರ ಜೀವನ ಮಟ್ಟವನ್ನು ಉತ್ತಮವಾಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಕಾಂಗ್ರೆಸ್ ಮುಖಂಡರಾದ ರವಿ ಭೋಸರಾಜು ಹೇಳಿದ್ದಾರೆ.
ವೈಜ್ಞಾನಿಕವಾಗಿ ಪರಿಶೀಲನೆ ನಡೆಸುವ ಮೂಲಕ ಹಾಗೂ ಮೋಡಗಳ ಲಭ್ಯತೆಯ ಅನುಸಾರವಾಗಿ ಜಿಲ್ಲೆಯಾದ್ಯಂತ ಮೋಡ ಬಿತ್ತನೆಯ ಕಾರ್ಯವನ್ನು ಕೈಗೊಳ್ಳಲಾಗುವುದು. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಮೋಡ ಬಿತ್ತನೆಯ ಕಾರ್ಯ ಯಶಸ್ವಿಯಾಗಿದ್ದು, ರಾಯಚೂರು ಜಿಲ್ಲೆಯಲ್ಲೂ ಮೋಡ ಬಿತ್ತನೆ ಯಶಸ್ವಿಯಾಗುವ ಮೂಲಕ ಮಳೆಯಾಗಲಿದೆ ಎನ್ನುವುದು ನಮ್ಮ ವಿಶ್ವಾಸವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.