ರಾಜ್ಯದಲ್ಲಿ ತೀವ್ರ ಬರದ ಪರಿಣಾಮ : ಖರ್ಚು-ವೆಚ್ಚಗಳ ವಿಚಾರದಲ್ಲಿ ಬಿಗಿ ನಿಲುವು
ಬೆಂಗಳೂರು: ರಾಜ್ಯಾದ್ಯಂತ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಅನಗತ್ಯ ವೆಚ್ಚಗಳಿಗೆ ಸರ್ಕಾರ ಕಡಿವಾಣ ಹಾಕಿದೆ. ರಾಜ್ಯದ ಬಹುಭಾಗ ಮುಂಗಾರು ಹಾಗೂ ಹಿಂಗಾರು ಮಳೆ ವಿಫಲವಾಗಿದ್ದು ಬರಗಾಲ ತಾಂಡವವಾಡುತ್ತಿರುವುದರಿಂದ ಸರ್ಕಾರ ಖರ್ಚು-ವೆಚ್ಚಗಳ ವಿಚಾರದಲ್ಲಿ ಬಿಗಿ ನಿಲುವು ತೆಗೆದುಕೊಂಡಿದೆ.
ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಹೆಚ್ಚುವರಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದಿರುವಂತೆ ಎಲ್ಲಾ ಇಲಾಖೆಗಳಿಗೆ ಆದೇಶ ಮಾಡಲಾಗಿದೆ.
ಈ ಹಿಂದಿನ ಸರ್ಕಾರ ಹೆಚ್ಚುವರಿಯಾಗಿ ಕೈಗೊಂಡ ಕಾಮಗಾರಿಗಳ ಬಾಕಿ ಬಿಲ್ಲಿನ ಪ್ರಮಾಣ ಇಪ್ಪತ್ತೇಳು ಸಾವಿರ ಕೋಟಿ ರೂ.ಗಳನ್ನು ಮೀರಿದ್ದು, ಅದನ್ನು ಪಾವತಿಸುವುದರೊಂದಿಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಅನಿವಾರ್ಯತೆ ಇರುವುದರಿಂದ ಯಾವುದೇ ಹೊಸ ಹೊರೆಗಳು ಬೇಡ ಎಂದು ಸೂಚನೆ ನೀಡಲಾಗಿದೆ.
ಸರ್ಕಾರದ ಆರ್ಥಿಕ ಪರಿಸ್ಥಿತಿ ನಿರ್ವಹಿಸುವ ಮಟ್ಟದಲ್ಲಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ರೈತರ ಕೃ ಪಂಪ್ ಸೆಟ್‌ಗಳಿಗೆ ಒದಗಿಸುವ ವಿದ್ಯುತ್‌ಗೆ ಈ ವರ್ಷ ೪೦೦೦ ಕೋಟಿ ರೂ. ಪಾವತಿಸುವ ಅನಿವಾರ್ಯತೆ ಇದೆ.
ಈ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿದ್ದು ಕಳೆದ ವರ್ಷದ ಅಕ್ಟೋಬರ್ ಅಂತ್ಯಕ್ಕೆ ಹೋಲಿಸಿದರೆ, ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ ೧೦೦೦೦ ಕೋಟಿ ರೂ.ಗಳಷ್ಟು ಹೆಚ್ಚು ತೆರಿಗೆ ಸಂಗ್ರಹ ಮಾಡಲಾಗಿದೆ.
ಜಿ.ಎಸ್.ಟಿ.ಬಾಬ್ತಿನಲ್ಲಿ ಕಳೆದ ವರ್ಷದ ಅಕ್ಟೋಬರ್ ಅಂತ್ಯಕ್ಕೆ ೪೭ ಸಾವಿರ ಕೋಟಿ ರೂ.ಸಂಗ್ರಹಿಸಲಾಗಿತ್ತು. ಆದರೆ ಈ ವರ್ಷ ಅಕ್ಟೋಬರ್ ಅಂತ್ಯದ ವೇಳೆಗೆ ೫೨೭೬೦ ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ.
ಅಬಕಾರಿ ಬಾಬ್ತಿನಲ್ಲಿ ಕಳೆದ ವರ್ಷ ಅಕ್ಟೋಬರ್ ಅಂತ್ಯದ ವೇಳೆಗೆ ೧೭ ಸಾವಿರ ಕೋಟಿ ರೂ. ಸಂಗ್ರಹವಾಗಿದ್ದರೆ. ಈ ವರ್ಷ ೧೯ ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಗಣಿ ಬಾಬತ್ತಿನಿಂದ ಕಳೆದ ವರ್ಷ ಅಕ್ಟೋಬರ್ ಅಂತ್ಯದ ಹೊತ್ತಿಗೆ ೩೦೦೦ ಕೋಟಿ ರೂ. ಸಂಗ್ರಹವಾಗಿದ್ದರೆ, ಈ ವರ್ಷ ೩೯೦೦ ಕೋಟಿ ರೂ. ಸಂಗ್ರಹವಾಗಿದೆ ಎಂದು ಉನ್ನತ ಮೂಲಗಳು ವಿವರಿಸಿವೆ.
ಸ್ವತ್ತುಗಳ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಸಲಾಗಿದ್ದು, ಮಾರ್ಚ್ ಅಂತ್ಯದ ವೇಳೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಹಣವನ್ನು ಸಂಗ್ರಹಿಸಬೇಕು ಎಂದು ಗುರಿ ನಿಗದಿ ಮಾಡಲಾಗಿದೆ.
ಈ ಮಧ್ಯೆ ಕೇಂದ್ರ ಸರ್ಕಾರದ ವತಿಯಿಂದ ರಾಜ್ಯಕ್ಕೆ ಬರಬೇಕಾದ ಬಹುತೇಕ ಹಣ ಬಂದಿದೆ. ವಿವಿಧ ಯೋಜನೆಗಳಡಿ ಕೇಂದ್ರದಿಂದ ಬರಬೇಕಾದ ಹೊಂದಾಣಿಕೆ ಹಣ ಸಕಾಲಕ್ಕೆ ಪಾವತಿಯಾಗುತ್ತಿದ್ದು ಜಿಎಸ್ಟಿ ಬಾಕಿಯಲ್ಲೂ ಬಹುತೇಕ ಹಣ ಬಂದಿದೆ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.