ಸಾರ್ವಜನಿಕರ ಸುರಕ್ಷಿತ ಪ್ರಯಾಣವೇ ಬಿಎಂಟಿಸಿ ಮುಖ್ಯ ಉದ್ದೇಶ
ಬೆಂಗಳೂರು: ಪ್ರಸಕ್ತ ನವೆಂಬರ್ ತಿಂಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ರಸ್ತೆ ಸುರಕ್ಷತಾ ಮಾಸವಾಗಿ ಆಚರಿಸಲು ನಿರ್ಧರಿಸಿದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ.ಜಿ ಅವರು, ಸಂಸ್ಥೆಯ ೬ ವಲಯಗಳಾದ ಪೂರ್ವ, ಪಶ್ವಿಮ, ಉತ್ತರ, ದಕ್ಷಿಣ, ಕೇಂದ್ರೀಯ, ಈಶಾನ್ಯ ವಲಯಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಡಿ ಬರುವ ಎಲ್ಲಾ ಘಟಕಗಳ ಚಾಲನಾ ಸಿಬ್ಬಂದಿಗಳಿಗೆ ಅಪಘಾತರಹಿತ ಮತ್ತು ಸುರಕ್ಷತಾ ಚಾಲನಾ ಕ್ರಮಗಳ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲು ಆದೇಶಿಸಿದರು.
ಸಂಸ್ಥೆಯ 6 ವಲಯಗಳಿಂದ ಹೊಸಕೋಟೆ ಬಸ್ ನಿಲ್ದಾಣ, ಚಲ್ಲಘಟ್ಟ ಕಾರ್ಯಾಗಾರ, ಉತ್ತರ ವಲಯದ ಪುಟ್ಟೇನಹಳ್ಳಿ ಘಟಕ, ಕೇಂದ್ರೀಯ ವಲಯದ ಘಟಕ ೨೫, ದಕ್ಷಿಣ ವಲಯದ ಕಲಾಸಿಪಾಳ್ಯ ಬಸ್ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ತರಬೇತಿ ಕಾರ್ಯಾಗಾರವನ್ನು ಸಂಸ್ಥೆಯ ನಿರ್ದೇಶಕರಾದ (ಭ ಮತ್ತು ಜಾ) ಕಲಾ ಕೃಷ್ಣಸ್ವಾಮಿ ಉದ್ಘಾಟಿಸಿ, ಸುರಕ್ಷತಾ ಚಾಲನೆಯ ಚಾಲಕರೊಂದಿಗೆ ಸಂವಾದ ನಡೆಸಿದರು.
ಸಂಸ್ಥೆಯಲ್ಲಿ ಸುಮಾರು 10,000 ಚಾಲನಾ ಸಿಬ್ಬಂದಿಗಳಿದ್ದು, ದಿನಂಪ್ರತಿ 300 ಚಾಲಕರಂತೆ ವಾರಕ್ಕೆ 1,800 ಚಾಲಕರನ್ನು 35 ದಿನಗಳೊಳಗಾಗಿ ಅಪಘಾತರಹಿತ ಮತ್ತು ಸುರಕ್ಷತಾ ಚಾಲನಾ ಕ್ರಮಗಳ ಬಗ್ಗೆ ತರಬೇತಿ ನೀಡಬೇಕು.
ಚಾಲನಾ ಸಿಬ್ಬಂದಿಗಳ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಸಾರ್ವಜನಿಕರ ಸುರಕ್ಷತೆಯ ಪ್ರಯಾಣವೇ ಬೆಂ.ಮ.ಸಾ.ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಈ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.