ಮುಂಚೂಣಿಯಲ್ಲಿ ವಿ.ಸೋಮಣ್ಣ ಅಥವಾ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಸಮೀಕ್ಷೆ ಮೊರೆ ಹೋಗಿದ್ದ ಪಕ್ಷದ ವರಿಷ್ಠರಿಗೆ ಹೊಸ ಇಕ್ಕಟ್ಟು ಎದುರಾಗಿದೆ.
ಜಾತಿಗಳ ಪ್ರಭಾವದಿಂದ ಪಕ್ಷವನ್ನು ಹೊರಗೆ ತಂದು ಸಂಘಟನೆ ಕಟ್ಟುವ ವರಿಷ್ಠರ ಕನಸು ವಿಫಲಗೊಂಡಿದ್ದು, ವೀರಶೈವ ಸಮುದಾಯಕ್ಕೆ ಸೇರಿದ ನಾಯಕರನ್ನೇ ಆಯ್ಕೆ ಮಾಡುವಂತೆ ಎರಡೂ ಸಮೀಕ್ಷೆಗಳು ವರದಿ ನೀಡಿವೆ.
ಮಾಜಿ ಸಚಿವ ವಿ.ಸೋಮಣ್ಣ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಮುಂಚೂಣಿಯಲ್ಲಿದೆ.
ಸಮೀಕ್ಷೆಗೂ ಮೊದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಈ ಸ್ಥಾನಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಅವರು ಆಸಕ್ತಿ ತೋರಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲವೂ ಇತ್ತು.
ಶೋಭಾ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರೂ ಇದೇ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಪಕ್ಷಕ್ಕೆ ಲಾಭದಾಯಕವಲ್ಲ ಎಂಬ ವರದಿಯ ಹಿನ್ನೆಲೆಯಲ್ಲಿ ವರಿಷ್ಠರು ಈ ನಿಧಾರವನ್ನು ತಡೆಹಿಡಿದಿದ್ದಾರೆ.
ದೀಪಾವಳಿ ಹಬ್ಬದ ನಂತರ ಹೊಸ ಬಿಜೆಪಿ ಅಧ್ಯಕ್ಷರ ನೇಮಕ
ರಾಜ್ಯಾಧ್ಯಕ್ಷರ ನೇಮಕಾತಿಗೆ ಕರ್ನಾಟಕದ ಮುಖಂಡರಿಂದ ಒತ್ತಡಗಳಿವೆ. ಇದಕ್ಕೆ ಮಣಿಯಬಾರದೆಂದು ಪಕ್ಷದ ವರಿಷ್ಠರು ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ನಡೆಸುವ ಸಂದರ್ಭದಲ್ಲೇ ಈ ಸ್ಥಾನಕ್ಕೂ ಸಮೀಕ್ಷೆ ನಡೆಸಿದೆ.
ಪಕ್ಷದ ಕಾರ್ಯಕರ್ತರು ಹಾಗೂ ಜನಾಭಿಪ್ರಾಯದಲ್ಲಿ ವೀರಶೈವ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯ.
ಒಂದು ವೇಳೆ ಈ ಸಮುದಾಯಕ್ಕೆ ಅವಕಾಶ ಮಾಡಿಕೊಡುವುದಾದರೆ ಸಂಘಟನಾ ದೃಷ್ಟಿಯಿಂದ ವಿ. ಸೋಮಣ್ಣ ಇಲ್ಲವೇ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಯತ್ನಾಳ್ ಅವರಿಗೆ ಬೆಂಬಲ ವ್ಯಕ್ತವಾಗಿದೆ.
ಯತ್ನಾಳ್ ಅವರನ್ನು ನೇಮಕ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಒಲವು ತೋರುತ್ತಿಲ್ಲ. ರಾಜ್ಯಾಧ್ಯಕ್ಷರಾಗಿ ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷವನ್ನೇ ಗೊಂದಲಕ್ಕೆ ಸಿಲುಕಿಸಿದರೆ ಏನು ಮಾಡುವುದು ಎಂಬ ಭಯ ಕಾಡುತ್ತಿದೆ.
ಸೋಮಣ್ಣ ಬಗ್ಗೆ ಗೃಹ ಸಚಿವರಿಗೆ ಒಲವು ಇದ್ದಂತಿದೆ, ಪಕ್ಷದ ಸೂಚನೆಯಂತೆ ತಮ್ಮ ಕ್ಷೇತ್ರ ತೊರೆದು ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಫರ್ಧಿಸಿ ಆದೇಶ ಪಾಲನೆ ಮಾಡಿದ್ದು, ಈಗ ಅವರಿಗೆ ವರದಾನವಾಗುತ್ತಿದೆ.
ಆರು ತಿಂಗಳಾದರೂ ವಿಧಾನಸಭೆ ವಿರೋಧ ಪಕ್ಷದ ನಾಯಕನಿಲ್ಲ
ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಪೂರ್ಣಗೊಂಡು 8 ತಿಂಗಳೇ ಕಳೆದಿದೆ. ಅಲ್ಲದೆ, ವಿಧಾನಸಭೆಯ ಪ್ರತಿಪಕ್ಷ ಸ್ಥಾನಕ್ಕೆ 6 ತಿಂಗಳಿನಿಂದಲೂ ನೇಮಕವಾಗಿಲ್ಲ. ಸದ್ಯಕ್ಕೆ ರಾಜ್ಯಾಧ್ಯಕ್ಷರ ಸ್ಥಾನ ಭರ್ತಿ ಮಾಡಲು ವರಿಷ್ಠರು ಕಸರತ್ತು ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ಲೋಕಸಭಾ ಚುನಾವಣೆ ಕುರಿತು ಸಮಾಲೋಚನೆ ನಡೆಸಲು ನವೆಂಬರ್ 10ನ್ನು ಮೀಸಲಿಟ್ಟಿದ್ದಾರೆ.
ಅಂದು ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆ ನಡೆದು ದೀಪಾವಳಿ ಹಬ್ಬದ ನಂತರ ಹೊಸ ಅಧ್ಯಕ್ಷರ ನೇಮಕಾತಿ ಆಗಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.