ಆಪರೇಷನ್ ಕಮಲ ಮಾಡುವುದಿಲ್ಲ, ಆಡಳಿತ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡೋಣ ಎಂದು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ.
ಪಕ್ಷದ ರಾಜ್ಯ ಕಾರ್ಯಾಲಯದಲ್ಲಿಂದು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗಿದೆ, ಹಗಲು ದರೋಡೆ ನಡೆದಿದೆ, ಭ್ರಷ್ಟಾಚಾರ ಮಿತಿ ಮೀರಿದೆ ಎಂದರು.
ನಾವು ಆಪರೇಷನ್ ಕಮಲ ಮಾಡುವುದಿಲ್ಲ, ಆಡಳಿತ ಪಕ್ಷದ ಶಾಸಕರೇ ರಸ್ತೆಯಲ್ಲಿ ಓಡಾಡದಂತಾಗಿದೆ, ಅವರ ಕ್ಷೇತ್ರಗಳಿಗೆ ಒಂದು ರೂಪಾಯಿಯೂ ಅನುದಾನ ಸಿಗುತ್ತಿಲ್ಲ, ಭ್ರಷ್ಟ ಸರಕಾರಕ್ಕೆ ಆ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ.
ಬರ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ, ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ.
ಎಲ್ಲಾ 28 ಕ್ಷೇತ್ರ ಗೆದ್ದು ಪ್ರಧಾನಿ ಅವರಿಗೆ ಹೆಚ್ಚು ಬಲ ನೀಡೋಣ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಕ್ಷೇತ್ರ ಗೆಲ್ಲುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚು ಬಲ ನೀಡೋಣ.
ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ರಾಜ್ಯವನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಬೇಕು.
ರೈತರು, ಬಡವರ ಪರ ಧ್ವನಿ ಎತ್ತುವೆ
ಎಲ್ಲ ಹಿರಿಯರ ಹಾಗೂ ಸಂಘ ಪರಿವಾರದ ಮಾರ್ಗದರ್ಶನದಡಿ ಬಿಜೆಪಿಗೆ ಶಕ್ತಿ ತುಂಬುತ್ತೇನೆ. ಹಗಲು ರಾತ್ರಿ ಪ್ರವಾಸ ಮಾಡಿ, ರೈತರು, ಬಡವರ ಪರ ಧ್ವನಿ ಎತ್ತುವೆ, ರಾಜ್ಯದಲ್ಲಿನ ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಮಾಡುತ್ತೇನೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರ ಕೃಪಾಶೀರ್ವಾದದಿಂದ ಈ ಜವಾಬ್ದಾರಿ ಸಿಕ್ಕಿದೆ, ಇದಕ್ಕಾಗಿ ಎಲ್ಲ ರಾಷ್ಟ್ರೀಯ ನಾಯಕರಿಗೆ ಕೃತಜ್ಞತೆಗಳು ಎಂದರು.
ನನ್ನ ಮೇಲೆ ಪಕ್ಷ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವೆ, ಶಾಸಕರಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು.
ರಾಜ್ಯಾಧ್ಯಕ್ಷ ಹುದ್ದೆಗೆ ನನ್ನ ಹೆಸರು ಪ್ರಕಟಿಸಿದ ನಂತರ ಎಲ್ಲ ಹಿರಿಯ ನಾಯಕರ ಜೊತೆ ಮಾತನಾಡಿದ್ದೇನೆ, ಪಕ್ಷದ ಎಲ್ಲ ಹಿರಿಯರು ಬೆನ್ನು ತಟ್ಟಿದ್ದಾರೆ.
ಕಾರ್ಯಕರ್ತರು ತಲೆ ತಗ್ಗಿಸುವಂತಹ ಕೆಲಸ ಮಾಡುವುದಿಲ್ಲ
ಯಡಿಯೂರಪ್ಪ ಅವರ ಹೋರಾಟ, ಸಾಮಾನ್ಯ ಕಾರ್ಯಕರ್ತರಿಗೆ ಗೌರವ ಕೊಡುವ ಪ್ರವೃತ್ತಿ ತಿಳಿದಿದೆ, ಕಾರ್ಯಕರ್ತರು ತಲೆ ತಗ್ಗಿಸುವ ಸಂದರ್ಭ ಸೃಷ್ಟಿಸಲು ಅವಕಾಶ ಕೊಡುವುದಿಲ್ಲ ಎಂದರು.
ನಿರ್ಗಮಿತ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ತಮಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಎಲ್ಲ ರೀತಿಯ ಸಹಕಾರ ಮತ್ತು ಮಾರ್ಗದರ್ಶನ ನೀಡುವಂತೆ ವಿನಂತಿಸಿದರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ್, ಹಿರಿಯ ನಾಯಕ ರಾಮಚಂದ್ರ ಗೌಡ, ಮಾಜಿ ಸಚಿವರು, ಮಾಜಿ ಹಾಗೂ ಹಾಲಿ ಶಾಸಕರು, ಜಿಲ್ಲಾಧ್ಯಕ್ಷರು, ಸಂಸದರು, ಪಕ್ಷದ ರಾಜ್ಯ-ಜಿಲ್ಲಾ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತಿತರಿದ್ದರು.