ರಾಜ್ಯದಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಲು ವಿಶೇಷ ಗಮನ : ಎಚ್.ಕೆ. ಪಾಟೀಲ್
ಬೆಂಗಳೂರು:ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ಸೇರಿದಂತೆ ಅಲ್ಲಿನ ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ನೀತಿಯನ್ನು ಮಾರ್ಪಡಿಸಿ ಉನ್ನತೀಕರಿಸಿ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಪಾರಂಪರಿಕ ಕಟ್ಟಡ ಉಳಿವಿಗೂ ಈ ನೀತಿಯಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದರು.
ಲಲಿತ ಮಹಲ್ ಹೋಟೆಲ್ ಕಟ್ಟಡ ದುರ್ಬಲವಾಗಿದ್ದು, ಅದನ್ನು ಸಂರಕ್ಷಿಸಲು ತುರ್ತಾಗಿ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಿದೆ, ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪರಿಷ್ಕೃತ ಪ್ರವಾಸೋದ್ಯಮ ನೀತಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು, ರಾಜ್ಯದಲ್ಲಿರುವ ಸ್ಮಾರಕಗಳನ್ನು ಸಂರಕ್ಷಿಸಲು ವಿಶೇಷ ಗಮನ ನೀಡಿರುವುದಾಗಿ ಹೇಳಿದರು. ಕನ್ನಡಿಗರ ಹೆಮ್ಮೆಯ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಮಳಖೇಡದಲ್ಲಿರುವ ಕೋಟೆಯನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸ್ಮಾರಕಗಳನ್ನು ಸಂರಕ್ಷಿಸುವ ಯೋಜನೆಗೆ ಸರ್ಕಾರ ಬದ್ಧವಾಗಿದೆ ಎಂದರು