ಸರ್ಕಾರಕ್ಕೆ ಆಡಳಿತ ಪಕ್ಷದ ಶಾಸಕರೇ ತಕ್ಕ ಪಾಠ ಕಲಿಸುವರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಆಪರೇಷನ್ ಕಮಲದ ಅಗತ್ಯವಿಲ್ಲ, ಈ ದುಷ್ಟ ಸರ್ಕಾರಕ್ಕೆ ಆ ಪಕ್ಷದ ಶಾಸಕರೇ ಪಾಠ ಕಲಿಸುವ ಸಮಯ ದೂರ ಉಳಿದಿಲ್ಲ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಆಡಳಿತ ಪಕ್ಷದ ಶಾಸಕರೇ ಅವರ ಕ್ಷೇತ್ರಗಳಲ್ಲಿ ಓಡಾಡದಂತಾಗಿದೆ. ಸರ್ಕಾರದಿಂದ ಒಂದು ರೂ.ಅನುದಾನ ಸಿಗುತ್ತಿಲ್ಲ. ಈ ದುಷ್ಟ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರೇ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಂಡ ವಿಜಯೇಂದ್ರ
ಹಿಂದಿನ ನಮ್ಮ ಸರ್ಕಾರವನ್ನು ಶೇ.40ರಷ್ಟು ಸರ್ಕಾರವೆಂದು ಟೀಕಿಸಿದ್ದರು. ಮತದಾರರು ಅದನ್ನು ನಂಬಿದರು. ಕಾಂಗ್ರೆಸ್ ಸರ್ಕಾರ ಬಂದು 6 ತಿಂಗಳಾಗಿದೆ. ಹಗಲು ದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ. ಶೇ.40ರಷ್ಟು ಕಮಿಷನ್, ಭ್ರಷ್ಟಾಚಾರದ ಅನುಷ್ಠಾನ ಈ ಸರ್ಕಾರದಿಂದ ಅವ್ಯಾಹತವಾಗಿ ನಡೆಯುತ್ತಿದೆ.
ಇವರ ದುರಾಡಳಿತವನ್ನೇ ಜನರ ಮುಂದಿಟ್ಟು ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ ಸರ್ಕಾರಕ್ಕೆ ಉತ್ತರ ಕೊಡೋಣ, ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರು, ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಮರೆತು ಅಧಿಕಾರ ದರ್ಪ ಮತ್ತು ಉದ್ಧಟತನದಿಂದ ವರ್ತಿಸುತ್ತಿದ್ದಾರೆ.
ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆ ಗಂಭೀರವಾಗಿ ಪರಿಗಣಿಸಿ
ನಮಗೆ ತಕ್ಷಣಕ್ಕೆ ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆ ಎದುರಾಗಬಹುದು. ಅದನ್ನು ಗಂಭೀರವಾಗಿ ಪರಿಗಣಿಸೋಣ. ನಾನು ಯಾವುದೇ ಸಮುದಾಯಕ್ಕೆ ಸೇರಿದವನಲ್ಲ. ಎಲ್ಲರ ವಿಶ್ವಾಸಗಳಿಸಿ ಪಕ್ಷವನ್ನು ಸಂಘಟಿಸಿ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 28 ರಲ್ಲೂ ಗೆಲುವು ಸಾಧಿಸಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದು ಕಮಲದ ಬಾವುಟ ಹಾರಿಸೋಣ ಎಂದರು.
ರಾಜ್ಯದಲ್ಲಿ ಸಾಕಷ್ಟು ಹಿರಿಯರು ಪಕ್ಷದಲ್ಲಿದ್ದಾರೆ. ಅವರನ್ನು ಬಿಟ್ಟು ನನಗೆ ಅವಕಾಶ ಕೊಟ್ಟಿದ್ದಾರೆ ಎಂದರೆ, ಆ ಸ್ಥಾನದ ಮಹತ್ವದ ಅರಿವು ನನಗಿದೆ. ಈ ವೇದಿಕೆಯ ಮೂಲಕ ಭರವಸೆ ನೀಡುತ್ತೇನೆ. ಹಿರಿಯ ನಾಯಕರು ಮತ್ತು ಕಾರ್ಯಕರ್ತರು ತಲೆ ತಗ್ಗಿಸುವ ರೀತಿ ನಡೆದುಕೊಳ್ಳುವುದಿಲ್ಲ. ಅವರಿಗೆ ಎಲ್ಲಾ ಪರಿಸ್ಥಿತಿಯಲ್ಲೂ ಬೆಂಬಲವಾಗಿ ನಿಂತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಹೋಮ, ಹವನ
ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಪಕ್ಷದ ಕಚೇರಿಯಲ್ಲಿ ಹೋಮ, ಹವನ ನಡೆಯಿತು. ಬಹುದಿನಗಳ ನಂತರ ಕಚೇರಿಯನ್ನು ಮೈಸೂರಿನ ಅರಮನೆ ರೀತಿ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಸ್ಥಳದಲ್ಲಿದ್ದು, ಪುತ್ರನಿಗೆ ಮಾರ್ಗದರ್ಶನ ಮಾಡಿದರು.
ಅಧಿಕಾರ ಸ್ವಿಕಾರ ಕಾರ್ಯಕ್ರಮದತ್ತ ಸುಳಿಯದ ಸಂತೋಷ್ ಬಣದವರು
ಅಧಿಕಾರ ಪದಗ್ರಹಣ ಅದ್ದೂರಿಯಾಗಿ ನಡೆಯಿತಾದರೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಣದ ಯಾವೊಬ್ಬ ನಾಯಕ, ಮುಖಂಡರು ಸುಳಿಯಲಿಲ್ಲ.
ಅಧಿಕಾರ ವಹಿಸಿಕೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಸಂದರ್ಭದಲ್ಲಿ ವಿಜಯೇಂದ್ರ ಅವರು, ಪದೇ ಪದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಗುಣಗಾನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ, ಬಿ.ಎಲ್.ಸಂತೋಷ್ ಅವರ ಕೃಪಾಶೀರ್ವಾದದಿಂದ ಈ ಜವಾಬ್ದಾರಿ ಸಿಕ್ಕಿದೆ. ಇದಕ್ಕಾಗಿ ಎಲ್ಲಾ ರಾಷ್ಟ್ರೀಯ ನಾಯಕರಿಗೂ ಕೃತಜ್ಞತೆ ಸಲ್ಲಿಸಿದರು.
ನಡ್ಡಾಜಿ ಅವರು, ನನ್ನ ಹೆಸರು ಪ್ರಕಟಿಸಿದ ಬಳಿಕ ಎಲ್ಲಾ ಹಿರಿಯ ನಾಯಕರ ಜತೆ ಮಾತನಾಡಿದ್ದು, ಅವರು ನನ್ನ ಬೆನ್ನು ತಟ್ಟಿದ್ದಾರೆ. ರಾಜ್ಯದ 28ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೇಶದ ನಿಸ್ವಾರ್ಥ ಸೇವೆ ಮಾಡುವುದಾಗಿ ಹೇಳಿದರು.