ನವೆಂಬರ್ 19ರ ಫೈನಲ್ ಪಂದ್ಯದ ಮೇಲೆ ಎಲ್ಲರ ಕಣ್ಣು
ಮುಂಬೈ:ಬುಧವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜೀಲ್ಯಾಂಡ್ ನಡುವಿನ 2023ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ 70 ರನ್‌ಗಳ ಭರ್ಜರಿ ಜಯ ಗಳಿಸಿದ್ದು, ಟ್ರೋಫಿ ಎತ್ತಿಹಿಡಿಯಲು ಇನ್ನು ಒಂದೇ ಒಂದು ಗೆಲುವು ಬಾಕಿ ಇದೆ.
ಭಾರತದ 377 ರನ್‌ಗಳ ಬೃಹತ್ ಮೊತ್ತ ಬೆನ್ನು ಹತ್ತಿದ ನ್ಯೂಜೀಲ್ಯಾಂಡ್ ತಂಡ ಇನ್ನೂ 70 ರನ್‌ಗಳ ಗುರಿ ಇರುವಂತೆಯೇ ಆಲ್‌ಔಟ್ ಆಯಿತು.
ಇದರೊಂದಿಗೆ ಭಾರತ ಫೈನಲ್ ಪ್ರವೇಶಸಿದ್ದು, ಗುರುವಾರ ಕೊಲ್ಕತಾದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾ ನಡುವಣ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.
ಬುಧವಾರ ಭಾರತ ಗಳಿಸಿದ ಅದ್ಭುತ ಜಯದಿಂದ ಪುಳಕಿತರಾಗಿರುವ ಬ್ಲ್ಯೂ ಟೀಮ್‌ನ ಅಭಿಮಾನಿಗಳು ’ವಿಶ್ವಕಪ್ ನಮ್ಮದೇ’ ಎಂದು ಜಯ ಘೋಷಣೆ ಹಾಕುತ್ತಿದ್ದುದು ಎಲ್ಲಡೆ ಕಂಡು ಬಂದಿತು.
ನವೆಂಬರ್ 19ರ ಭಾನುವಾರ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕಿನ 50ನೇ ಶತಕ
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ಬದುಕಿನ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿದರು.
ಕೊಹ್ಲಿ ಸಿಡಿಸಿದ ಶತಕದೊಂದಿಗೆ ಇನ್ನೊಬ್ಬ ಬ್ಯಾಟರ್ ಶ್ರೇಯಸ್ ಅಯ್ಯರ್ ಗಳಿಸಿದ ಶತಕವೂ ಭಾರತದ ಗೆಲುವಿನಲ್ಲಿ ಮಹತ್ವದ್ದಾಗಿದೆ.
ನ್ಯೂಜಿಲ್ಯಾಂಡ್ ತಂಡವನ್ನು ಆಲ್‌ಔಟ್ ಮಾಡುವಲ್ಲಿ ಮೊಹಮ್ಮದ್ ಶಮಿ ಪಾತ್ರ ಮಹತ್ವದ್ದಾಗಿದ್ದು, 57 ರನ್ ನೀಡಿ ಎದುರಾಳಿ ತಂಡದ 7 ವಿಕೆಟ್ ಕಿತ್ತಿದ್ದು ಕಡಿಮೆ ಸಾಧನೆಯೇನಲ್ಲ.
ಭಾರತ ತಂಡದ ಭರ್ಜರಿ ಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದು, ಜಗತ್ತಿನಾದ್ಯಂತ ಕ್ರಿಕಟ್ ದಿಗ್ಗಜರಲ್ಲದೆ, ಸ್ವಯಂ ಸಚಿನ್ ತೆಂಡೂಲ್ಕರ್ ಸಹಾ ಕೊಹ್ಲಿ ಶತಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಅವಕಾಶ
1983ರಲ್ಲಿ ಮೊದಲ ಬಾರಿಗೆ ಕಪಿಲ್ ದೇವ್ ನಾಯಕತ್ವದಲ್ಲಿ ಅಂದಿನ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಚೊಚ್ಚಲ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿದ್ದ ಭಾರತ, ಎಂ.ಎಸ್. ಧೋನಿ ನಾಯಕತ್ವದಲ್ಲಿ 2011ರಲ್ಲಿ 2ನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು.
ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ 12 ವರ್ಷಗಳ ಬಳಿಕ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಅವಕಾಶ ಬಂದಿದೆ.