ಯತೀಂದ್ರ ಕಾರ್ಯಕ್ಕೆ ಶಿವಕುಮಾರ್ ಸಮರ್ಥನೆ
ಬೆಂಗಳೂರು:ಯತೀಂದ್ರ ಅವರು ಯಾವ ಅಧಿಕಾರಿ ಹೆಸರು, ಯಾವ ಹುದ್ದೆ, ಎಷ್ಟು ಲಂಚ ಎಂದು ಎಲ್ಲಿ ಹೇಳಿದ್ದಾರೆ. ಕುಮಾರಸ್ವಾಮಿ ಸುಮ್ಮನೆ ಪ್ರಚಾರ ಮಾಡಿ ನಮ್ಮ ಹುಡುಗ (ಯತೀಂದ್ರ) ನನ್ನು ನಾಯಕನನ್ನಾಗಿ ಬೆಳೆಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ತಂದೆಯ ಜವಾಬ್ದಾರಿ ತೆಗೆದುಕೊಂಡು ತಮ್ಮ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ನಾನು ಬೆಳಿಗ್ಗೆಯೇ ಆ ವಿಡಿಯೋ ನೋಡಿದೆ. ವರ್ಗಾವಣೆ ದಂಧೆ ಎನ್ನಲು ಅವರು ಯಾವ ಅಧಿಕಾರಿ, ಯಾವ ಹುದ್ದೆ ಎಂದು ಉಲ್ಲೇಖವನ್ನೇ ಮಾಡಿಲ್ಲವಲ್ಲ ಎಂದರು.
ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡರೆ ತಪ್ಪೇನಿದೆ
ಮಾಜಿ ಶಾಸಕರಾಗಿ ಯತೀಂದ್ರ ಅವರು ಒಂದು ವೇಳೆ ತಮ್ಮ ಕ್ಷೇತ್ರಕ್ಕೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡರೆ ಅದರಲ್ಲಿ ತಪ್ಪೇನಿದೆ.
ಯಾರೋ ಒಂದಷ್ಟು ಶಾಲೆಗಳ ಹೆಸರನ್ನು ಬದಲಾಯಿಸಿದ ಕಾರಣ, ಸ್ಥಳೀಯರು ದೂರು ನೀಡಿದ್ದರು. ಅದಕ್ಕೆ ಯತೀಂದ್ರ ಅವರು ಇಂತಿಷ್ಟು ಹಳ್ಳಿಗಳ ಶಾಲೆಗಳಿಗೆ ಸೌಲಭ್ಯ ನೀಡುತ್ತೇವೆ ಎಂದು ಮಾತುಕೊಟ್ಟಿದ್ದು, ಅದರಂತೆ ಜನ ಸಂಪರ್ಕ ಸಭೆಯಲ್ಲಿಯೇ ಕರೆ ಮಾಡಿ ಮಾತನಾಡಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವಿರುತ್ತದೆ.
ನನ್ನ ಕೆಲಸಗಳನ್ನು ನನ್ನ ಸಹೋದರ, ಸಂಸದ ಸುರೇಶ್ ನೋಡಿಕೊಳ್ಳುತ್ತಾರೆ
ನಾನು ಅನೇಕ ಕೆಲಸಗಳನ್ನು ನನ್ನ ಕ್ಷೇತ್ರಗಳಲ್ಲಿ ಮಾಡಲು ಆಗುವುದಿಲ್ಲ, ಅವುಗಳನ್ನು ನನ್ನ ಸಹೋದರ, ಸಂಸದ ಸುರೇಶ್ ನೋಡಿಕೊಳ್ಳುತ್ತಾರೆ. ನಮ್ಮ ಕ್ಷೇತ್ರದ ಜನ ಮನೆ, ಹಸು, ಕುರಿ ಬೇಕು ಎಂದು ಮನವಿ ಸಲ್ಲಿಸಿರುತ್ತಾರೆ. ಆ ಅರ್ಜಿಗಳನ್ನು ನೋಡಿ ಸಹಿ ಹಾಕಿ ಕಳಿಸುತ್ತೇನೆ. ಕ್ಷೇತ್ರಗಳ ಕೆಲಸಗಳನ್ನು ಹೀಗೆಯೇ ಮಾಡುವುದು.
ಬಗರ್ ಹುಕುಂ ಸಮಿತಿಗೆ ನಾನು ಅಧ್ಯಕ್ಷನಾಗಲು ಆಗುವುದಿಲ್ಲ, ಅದರ ಬದಲು ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡುತ್ತೇವೆ.
ವಿದ್ಯುತ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ, ಯಾರೋ ಗುತ್ತಿಗೆದಾರನಿಗೆ ಅಲಂಕಾರ ಮಾಡು ಎಂದು ಹೇಳಿರುತ್ತಾರೆ, ಅವರು ಮಾಡಿರುವ ಕೆಲಸ ಇದಾಗಿರಬಹುದು. ಕುಮಾರಸ್ವಾಮಿ ಅವರು ಬಹಳ ದೊಡ್ಡತನದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದರು.