ಶಾಸಕರ ಅಧ್ಯಕ್ಷತೆಯ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಗಳಿಗೆ ವಹಿಸಲು ಸಚಿವ ಸಂಪುಟದ ಉಪ ಸಮಿತಿ ತೀರ್ಮಾನ
ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿನ ನಿರ್ವಹಣೆಯ ಜವಾಬ್ದಾರಿಯನ್ನು ಶಾಸಕರ ಅಧ್ಯಕ್ಷತೆಯ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಗಳಿಗೆ ವಹಿಸಲು ಸಚಿವ ಸಂಪುಟದ ಉಪ ಸಮಿತಿ ತೀರ್ಮಾನಿಸಿದೆ.
ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ನಡೆದ ನೈಸರ್ಗಿಕ ವಿಕೋಪಗಳ ನಿರ್ವಣೆ ಪರಾಮರ್ಶೆಗೆ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿಯಲ್ಲಿ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ,ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕಾ ಖರ್ಗೆ, ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಭಾಗವಹಿಸಿ ಹಲವು ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪ್ರತಿ ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳನ್ನು ಗುರುತಿಸಿ ಟ್ಯಾಕರ್ ಅಥವಾ ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದು ಯಾವುದೇ ಲೋಪಗಳಾಗದಂತೆ ನೀರು ಪೂರೈಸಬೇಕೆಂದು ಸಭೆಯಲ್ಲಿ ತೀರ್ಮಾನಸಿಲಾಯಿತು.
ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ 783 ಕೋಟಿರೂ ಅನುದಾನ
ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ 783 ಕೋಟಿರೂ ಅನುದಾನವನ್ನು ಬರ ನಿರ್ವಹಣೆಗೆ ಜವಾಬ್ದಾರಿಯುತವಾಗಿ ಬಳಸಲು ನಿರ್ದೇಶನ ನೀಡಲು ಸಮಿತಿ ತೀರ್ಮಾನಿಸಿತು.
ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಅಡಿಯಲ್ಲಿ ಬೆಳೆ ಹಾನಿಗೊಳಗಾದ ರೈತರ ಖಾತೆಗೆ 230 ಕೋಟಿ ರೂ. ವಿಮೆ ಪಾವತಿ ಪ್ರಕ್ರಿಯೆ ಪ್ರಾರಂಭಿಸಿದ್ದು, ತಕ್ಷಣ ರೈತರ ಖಾತೆಗೆ ಹಣ ಜಮೆ ಮಾಡಲು ವಿಮಾ ಕಂಪನಿಗಳಿಗೆ ಸೂಚಿಸಲು ಕೃಷಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೃಷಿ ,ತೋಟಗಾರಿಕೆ, ರೇಷ್ಮೆ ಯಲ್ಲಿ ನೀರಿನ ಮಿತ ಬಳಕೆ ಉತ್ತೇಜಿಸಲು ಹನಿ ನೀರಾವರಿ ಸಹಾಯಧನಕ್ಕೆ 800 ಕೋಟಿ ರೂ. ಹೆಚ್ಚುವರಿ ಅನುದಾನ ಕೋರಲು ಪ್ರಸ್ತಾವನೆ ಸಲ್ಲಿಸಲು ಸಹ ಸಚಿವ ಸಂಪುಟ ಉಪ ಸಮಿತಿಯ ತೀರ್ಮಾನಿಸಿತು.
ಫ್ರೂಟ್ಸ್ ಐ ಡಿಯಲ್ಲಿ ಬೆಳೆ ವಿವರಗಳ ಜೊತೆಗೆ ಎಲ್ಲಾಆರ್.ಟಿ.ಸಿ ಗಳ ಪ್ರಕಾರ ರೈತರ ಸಂಪೂರ್ಣ ಜಮೀನಿನ ವಿವರಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಒಂದು ವಾರದ ವಿಶೇಷ ಅಭಿಯಾನ ನಡೆಸಲು ಸಮಿತಿಯು ಕಂದಾಯ, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿತು.