ಬೆಂಗಳೂರು ಹಬ್ಬ ಆಚರಿಸಲು ನೂರಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಮುಂದಾಗಿವೆ
ಬೆಂಗಳೂರು:“ಸಂಸ್ಕೃತಿ, ಪರಂಪರೆ, ಪರಿಸರವೇ ಬೆಂಗಳೂರಿನ ದೊಡ್ಡ ಆಸ್ತಿ. ದೇಶದಲ್ಲೇ ಬೆಂಗಳೂರಿಗೆ ವಿಶಿಷ್ಟ ಸ್ಥಾನವಿದ್ದು, ಇದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಡಿಸಿಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ಬೆಂಗಳೂರು ಹಬ್ಬ ಘೋಷಣೆ ಮತ್ತು ಅನ್ ಬಾಕ್ಸಿಂಗ್ ಬೆಂಗಳೂರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು , “ಈ ಹಬ್ಬ ನಮ್ಮ ನಗರಕ್ಕೆ, ಮನೆಗೆ ಮಾಡುತ್ತಿರುವ ಶೃಂಗಾರ. ತಂತ್ರಜ್ಞಾನ, ಐಟಿ ಮತ್ತಿತರ ಕ್ಞೇತ್ರಗಳಲ್ಲಿ ನಮ್ಮ ನಗರ ದೊಡ್ಡ ಹೆಸರು ಮಾಡಿದೆ. ಇಲ್ಲಿನ ಸಂಸ್ಕೃತಿಗೆ ತನ್ನದೇ ಆದ ಸ್ಥಾನವಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ಬೆಂಗಳೂರು ಹಬ್ಬದ ಮೂಲಕ ಮಾಡಬೇಕು.
ಕರಗ, ಕಡಲೇಕಾಯಿ ಪರಿಷೆ ಸೇರಿದಂತೆ ಅನೇಕ ವಿಶಿಷ್ಟ ಆಚರಣೆಗಳನ್ನು ಬೆಂಗಳೂರು ಒಳಗೊಂಡಿದೆ. ಅನೇಕ ಇತಿಹಾಸ ತಜ್ಞರು ಬೆಂಗಳೂರು ಇತಿಹಾಸವನ್ನು ದಾಖಲು ಮಾಡಿದ್ದಾರೆ. ಬೆಂಗಳೂರು ಹಬ್ಬ ಆಚರಿಸಲು ನೂರಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಮುಂದಾಗಿರುವುದು ಸಂತಸದ ವಿಚಾರ. ಈ ಹಬ್ಬಕ್ಕೆ ಸರ್ಕಾರದ ಬೆಂಬಲವಿರುತ್ತದೆ.”
ಕನಕಪುರದಲ್ಲಿ ʼಕನಕೋತ್ಸವʼ ಕಾರ್ಯಕ್ರಮ
ನಮ್ಮ ಸ್ಥಳೀಯ ಕಲೆ, ಆಹಾರ, ಹಾಡು, ಹಬ್ಬಗಳನ್ನು ಹೊರ ಜಗತ್ತಿಗೆ ಪರಿಚಯಿಸಬೇಕಿದೆ. ನನ್ನ ಕ್ಷೇತ್ರದಲ್ಲಿ ʼಕನಕೋತ್ಸವʼ ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದ್ದು, ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುತ್ತಾರೆ. 50 ಸಾವಿರಕ್ಕೂ ಹೆಚ್ಚು ಮನೆಗಳ ಮುಂದೆ ರಂಗೋಲಿ ಬಿಡಿಸಿ, ಈ ಹಬ್ಬವನ್ನು ಯಶಸ್ವಿಗೊಳಿಸಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಾರೆ.
ಪೊಲೀಸ್, ಮೆಟ್ರೋ ಬಿಎಂಟಿಸಿ ಸೇರಿದಂತೆ ಇತರೆ ಸಂಸ್ಥೆಗಳ ಜೊತೆ ಮಾತನಾಡಿ ಈ ಹಬ್ಬಕ್ಕೆ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಬೇಕು. ಮುಂದಿನ ದಿನಗಳಲ್ಲಿ ಸರಣಿ ಸಭೆ ನಡೆಸಿ ಕೆಲಸ ಮಾಡೋಣ. ಬೆಂಗಳೂರಿನ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ. ಈ ಹಬ್ಬ ನಡೆಯುವಾಗ ಪೊಲೀಸ್ ಇಲಾಖೆ, ಬೆಸ್ಕಾಂ ಅವರು ಹೆಚ್ಚು ಜಾಗರೂಕರಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
45 ಕಡೆಗಳಲ್ಲಿ 300ಕ್ಕೂ ಹೆಚ್ಚು ಕಾರ್ಯಕ್ರಮ
ಬೆಂಗಳೂರು ಹಬ್ಬದ ಅಂಗವಾಗಿ ಈ ವರ್ಷ ಡಿಸೆಂಬರ್ 1 ರಿಂದ 11ರವರೆಗೂ ಬೆಂಗಳೂರಿನ 45 ಕಡೆಗಳಲ್ಲಿ 300ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ವರ್ಷ ಡಿಸೆಂಬರ್ ಮೊದಲ ಎರಡು ವಾರಗಳ ಕಾಲ ಈ ಹಬ್ಬ ಆಚರಣೆಯಾಗಲಿದೆ. ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ತಂತ್ರಜ್ಞಾನ, ಪರಿಸರ, ನೃತ್ಯ, ಸಂಗೀತ, ರಂಗಭೂಮಿ ಸೇರಿದಂತೆ 12 ವಿವಿಧ ಕ್ಷೇತ್ರಗಳ ಕಾರ್ಯಕ್ರಮಗಳು ನಡೆಯಲಿವೆ.
ಇದು ಕೇವಲ ಸಂಭ್ರಮಾಚರಣೆಗೆ ಸೀಮಿತವಲ್ಲ. ನಮ್ಮ ಸಂಸ್ಕೃತಿ, ಪರಂಪರೆಯತ್ತ ರಾಜ್ಯ, ದೇಶ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಬೆಂಗಳೂರಿನ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ರವಾನೆ ಮಾಡುವುದು ಈ ಹಬ್ಬದ ಉದ್ದೇಶ. ವ್ಯಾಪಾರ, ವಹಿವಾಟು, ಪ್ರವಾಸೋದ್ಯಮ ಚಟುವಟಿಕೆ ಮೂಲಕ ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲಾಗುವುದು.
ಅನ್ ಬಾಕ್ಸಿಂಗ್ ಬೆಂಗಳೂರು ಪುಸ್ತಕ ಬಿಡುಗಡೆ ಹಾಗೂ ಬೆಂಗಳೂರು ಹಬ್ಬ ಘೋಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಅನ್ ಬಾಕ್ಸಿಂಗ್ ಬೆಂಗಳೂರು ಫೌಂಡೇಶನ್ ಸಹ ಸಂಸ್ಥಾಪಕ ಪ್ರಶಾಂತ್ ಪ್ರಕಾಶ್, ಬೆಂಗಳೂರು ಹಬ್ಬದ ನಿರ್ದೇಶಕರಾದ ವಿ.ರವಿಚಂದರ್ ಮತ್ತಿತರರು ಉಪಸ್ಥಿತರಿದ್ದರು.