ಕುಮಾರಸ್ವಾಮಿ ಮಾಡಿಕೊಂಡಿರುವ ಬಿಜೆಪಿ ಮೈತ್ರಿಗೆ ಶಾಸಕರ ಸಂಪೂರ್ಣ ಬೆಂಬಲವಿದೆ
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಆಹ್ವಾನವನ್ನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡರು ನಯವಾಗಿ ತಳ್ಳಿಹಾಕಿದ್ದಾರೆ.
ಬಿಜೆಪಿ ಶಾಸಕ ಸೋಮಶೇಖರ್ ಜೊತೆಗೂಡಿ ಗೌಡರನ್ನು ಕಳೆದ ಎರಡು ದಿನಗಳ ಹಿಂದೆ ಶಿವಕುಮಾರ್ ಬೇಟಿ ಮಾಡಿ ಪಕ್ಷಕ್ಕೆ ಆಹ್ವಾನ ನೀಡಿದ್ದರು.
ಭೇಟಿಯ ಬಗ್ಗೆ ಜಿ.ಟಿ.ಡಿ. ಇಂದು ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿ, ಸದಾಶಿವನಗರದ ತಮ್ಮ ನಿವಾಸಕ್ಕೆ ಶಿವಕುಮಾರ್ ಬಂದಿದ್ದು ನಿಜ, ಪಕ್ಷಕ್ಕೆ ಸೇರಲು ಈಗಲೂ ಅವಕಶವಿದೆ, ಮನಸ್ಸು ಮಾಡಿ. ನಮ್ಮದೇ ಸರ್ಕಾರ ಇದೆ, ಅಧಿಕಾರದ ಅವಕಾಶ ಸಿಗಲಿದೆ. ಇದನ್ನು ನಿನಗೇ ಬಿಟ್ಟಿದ್ದೇನೆ, ನಾನು ಒತ್ತಾಯ ಮಾಡುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
135 ಶಾಸಕರಿರುವ ಕಾಂಗ್ರೆಸ್ ಗೆ ಬೇರೆ ಪಕ್ಷ ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯವಿಲ್ಲ
ನಾನು ಜೆಡಿಎಸ್‌ನ ಕೋರ್ ಕಮಿಟಿ ಅಧ್ಯಕ್ಷನಾಗಿ ಪಕ್ಷ ಕಟ್ಟುತ್ತಿದ್ದೇನೆ. ನಿಮ್ಮಲ್ಲೇ 135 ಶಾಸಕರು ಇದ್ದಾರೆ. ನೀವು ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯ ಬರಲ್ಲ ಎಂದು ಹೇಳಿ ಕಳಿಸಿದ್ದೇನೆ ಎಂದರು.
ಅದಕ್ಕೆ ಅವರು, ನಿನ್ನಿಷ್ಟ ನೋಡಪ್ಪ ಎಂದು ಹೋಗಿದ್ದಾರೆ. ಇವರು ಬಂದ ಸಂದರ್ಭದಲ್ಲಿ ನೀವು ಮತ್ತು ಕುಮಾರಸ್ವಾಮಿ ವೈರತ್ವ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದೇನೆ.
ಯಾಕೆ ನೀವಿಬ್ಬರೂ ವೈಯಕ್ತಿಕ ಮಟ್ಟಕ್ಕೆ ಇಳಿದು ಕಿತ್ತಾಡಿಕೊಳ್ಳುತ್ತಿದ್ದೀರಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ನೀವು ಈಗ ಉಪಮುಖ್ಯಮಂತ್ರಿ ಆಗಿದ್ದೀರಿ, ಮೊದಲು ನಿಮ್ಮಲ್ಲಿ ಒಳ್ಳೆ ಬಾಂಧವ್ಯ ಇತ್ತು, ಎಂದೆಲ್ಲಾ ತಿಳಿಸಿದ್ದೇನೆ.
19 ಜೆಡಿಎಸ್ ಶಾಸಕರು ಒಗ್ಗಟ್ಟಿನಿಂದಿದ್ದೇವೆ
ಅವರೂ ಏನೋ ಹೇಳುತ್ತಾರೆ. ನಾವು 19 ಶಾಸಕರು ಒಗ್ಗಟ್ಟಿನಿಂದಿದ್ದೇವೆ. ಬಿಜೆಪಿ ಜೊತೆ ಕೈಜೋಡಿಸಿದ್ದು ಇಬ್ಬರಿಗೂ ಅನುಕೂಲವಾಗಿದೆ.
ಮಾಜಿ ಶಾಸಕರಿಗೆ ಸ್ಥಳಿಯವಾಗಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಅಂತಹ ಕ್ಷೇತ್ರಗಳಲ್ಲಿ ನಮ್ಮವರು ಗೊಂದಲದಲ್ಲಿದ್ದಾರೆ. ಕುಮಾರಸ್ವಾಮಿ ಮಾಡಿಕೊಂಡಿರುವ ಮೈತ್ರಿಗೆ ಶಾಸಕರ ಸಂಪೂರ್ಣ ಬೆಂಬಲವಿದೆ ಎಂದರು.