ಕಳೆದ ವಾರ ದಿಲ್ಲಿಯಿಂದ ಬಂದ ಸಂದೇಶ ಯಡಿಯೂರಪ್ಪ ಅವರಿಗೆ ಹಿತಕರವಾಗಿರಲಿಲ್ಲವಂತೆ. ಕರ್ನಾಟಕದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಲಿಂಗಾಯತ ಸಮುದಾಯದವರನ್ನು ತರಬೇಕು ಎಂಬ ತೀರ್ಮಾನಕ್ಕೆ ಪಕ್ಷ ಬಂದಿದೆ. ಆದರೆ ವರಿಷ್ಟರ ಮನಸ್ಸಿನಲ್ಲಿ ನಿಮ್ಮ ಪುತ್ರ ವಿಜಯೇಂದ್ರ ಅವರ ಹೆಸರಿಲ್ಲ ಎಂಬುದು ಈ ಸಂದೇಶ.
ಅಂದ ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ, ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಅವರನ್ನು ತರಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಬಯಸಿದ್ದು ಮತ್ತು ಆ ಹೆಸರನ್ನು ಕ್ಲಿಯರ್ ಮಾಡಿದ್ದು ರಹಸ್ಯವೇನಲ್ಲ.
ಆದರೆ, ಶೋಭಾ ಕರಂದ್ಲಾಜೆ ಹೆಸರಿಗೆ ರಾಜ್ಯದ ಹಲ ನಾಯಕರು ಅಪಸ್ವರ ಎತ್ತುತ್ತಿದ್ದಂತೆಯೇ ಈ ಜಾಗಕ್ಕೆ ಬೇರೆ ಯಾರನ್ನು ತರಬಹುದು ಎಂಬ ಬಗ್ಗೆ ಬಿಜೆಪಿ ವರಿಷ್ಟರು ಮತ್ತೊಂದು ಸರ್ವೆಗೆ ಸೂಚನೆ ನೀಡಿದ್ದಾರೆ.
ಈ ತುರ್ತು ಸರ್ವೆಯ ವರದಿ, ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗರಿಗಿಂತ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ತರುವುದು ಬೆಸ್ಟು ಅಂತ ಹೇಳಿದೆ.
ಇವತ್ತು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಜತೆ ಮೈತ್ರಿಗೆ ಮುಂದಾಗಿರುವ ಜೆಡಿಎಸ್ ಪಕ್ಷದ ನಾಯಕತ್ವ ಅದೇ ಸಮುದಾಯದ ಹೆಚ್.ಡಿ.ಕುಮಾರಸ್ವಾಮಿ ಕೈಲಿದೆ. ಹೀಗಿರುವಾಗ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದವರನ್ನು ತರುವುದು ಪ್ರಾಕ್ಟಿಕಲ್ ಅಲ್ಲ ಎಂಬುದು ಇದಕ್ಕೆ ಕಾರಣ.
ಎಲ್ಲಕ್ಕಿಂತ ಮುಖ್ಯವಾಗಿ ಒಕ್ಕಲಿಗ ಮತಗಳನ್ನು ಎನ್ ಕ್ಯಾಶ್ ಮಾಡಲು ಮಿತ್ರ ಪಕ್ಷ ಜೆಡಿಎಸ್ ಇರುವಾಗ ನಾವು ಅದೇ ಸಮುದಾಯದ ಮತಗಳ ಮೇಲೆ ಗಮನ ಕೇಂದ್ರೀಕರಿಸಬೇಕಿಲ್ಲ. ಬದಲಿಗೆ ಪ್ರಬಲ ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟರೆ ಸಾಕು ಅಂತ ಈ ಸರ್ವೆ ವರದಿ ಹೇಳಿತ್ತಂತೆ.
ಯಾವಾಗ ಈ ವರದಿ ತಮ್ಮ ಕೈ ಸೇರಿತೋ? ಆಗ ಇದ್ದಕ್ಕಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ರೇಸಿನಿಂದ ಶೋಭಾ ಕರಂದ್ಲಾಜೆ ಅವರ ಹೆಸರು ಹಿಂದೆ ಸರಿದು, ಲಿಂಗಾಯತ ಸಮುದಾಯದ ನಾಯಕರ ಹೆಸರುಗಳು ಫ್ರಂಟ್ ಲೈನಿಗೆ ಬಂದಿವೆ.
ಹೀಗೆ ಫ್ರಂಟ್ ಲೈನಿಗೆ ಬಂದ ಲಿಂಗಾಯತ ನಾಯಕರ ಪಟ್ಟಿಯಲ್ಲಿ ಹಿರಿಯ ನಾಯಕ, ಮಾಜಿ ಸಚಿವ ವಿ.ಸೋಮಣ್ಣ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಕಾಣಿಸಿಕೊಂಡಾಗ ದಿಲ್ಲಿಯಿಂದ ಯಡಿಯೂರಪ್ಪ ಅವರಿಗೆ ಮೆಸೇಜು ಬಂದಿದೆ.
ಯಡ್ಯೂರಪ್ಪಾಜಿ, ಕರ್ನಾಟಕದಲ್ಲಿ ಲಿಂಗಾಯತ ನಾಯಕರನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕು ಅಂತ ತೀರ್ಮಾನವಾಗಿದೆ. ಆದರೆ ಈ ಲಿಂಗಾಯತ ನಾಯಕರು ಯಾರು ಎಂಬ ವಿಷಯ ಬಂದಾಗ ವರಿಷ್ಟರ ಮುಂದೆ ಬೇರೆ ಹೆಸರುಗಳಿವೆ. ನಿಮ್ಮ ಪುತ್ರನ ಹೆಸರು ಮಾತ್ರ ಇಲ್ಲ ಎಂಬ ಮಾತು ಕಿವಿಗೆ ಬಿದ್ದಾಗ ಯಡಿಯೂರಪ್ಪ ತಕ್ಷಣ ಎಚ್ಚೆತ್ತಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಸಂಪರ್ಕಸಿದ್ದಾರೆ.
ಅಂದ ಹಾಗೆ ಯಡಿಯೂರಪ್ಪ ಅವರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅಭಿಪ್ರಾಯಗಳು ಏನೇ ಇರಲಿ, ಆದರೆ ನಡ್ಡಾ ಮಾತ್ರ ಯಾವತ್ತೂ ಯಡಿಯೂರಪ್ಪ ಅವರ ಪರವಾಗಿಯೇ ನಿಂತವರು.
ಹೀಗಾಗಿ ಯಡಿಯೂರಪ್ಪ ಅವರು ತಮ್ಮನ್ನು ಸಂಪರ್ಕಿಸಿದಾಗ, ಯಡ್ಯೂರಪ್ಪಾಜಿ, ಕರ್ನಾಟಕದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರೇ ಅಧ್ಯಕ್ಷರಾಗಬೇಕು. ನಿಮ್ಮ ಪುತ್ರ ವಿಜಯೇಂದ್ರ ಅವರೇ ಆ ಜಾಗಕ್ಕೆ ಬರಬೇಕು ಅಂತ ನಾನು ಹೇಳುತ್ತಲೇ ಇದ್ದೇನೆ. ಆದರೆ ಪ್ರೈಮ್ ಮಿನಿಸ್ಟರ್ ಮತ್ತು ಹೋಮ್ ಮಿನಿಸ್ಟರ್ ಮನಸ್ಸಿನಲ್ಲಿ ಬೇರೆಯವರ ಹೆಸರಿದೆ ಅಂತ ನಡ್ಡಾ ಹೇಳಿದ್ದಾರೆ.
ಹಾಗೆಯೇ ಮುಂದುವರಿದು: ವಿಜಯೇಂದ್ರ ಅವರು ಅಧ್ಯಕ್ಷ ಸ್ಥಾನಕ್ಕೆ ಬಂದು ಕೂರಲೇಬೇಕು ಎಂದರೆ ನೀವೊಂದು ಕೆಲಸ ಮಾಡಬೇಕು. ನವೆಂಬರ್ ಹತ್ತರ ಶುಕ್ರವಾರ ಪ್ರಧಾನಿ ಮೋದೀಜಿ ತಮ್ಮೆಲ್ಲ ಕೆಲಸಗಳಿಂದ ಬಿಡುವು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕರ್ನಾಟಕದ ವಿಷಯ ಅವತ್ತು ಫೈನಲೈಸ್ ಅಗಲಿದೆ. ಹೀಗಾಗಿ ಅವತ್ತು ವಿಜಯೇಂದ್ರ ಯಾವ ಕಾರಣಕ್ಕಾಗಿ ಅಧ್ಯಕ್ಷರಾಗಬೇಕು ಎಂಬ ಮೆಸೇಜು ಅವರಿಗೆ ತಲುಪಬೇಕು ಅಂತ ವಿವರಿಸಿದ್ದಾರೆ.
ಯಾವಾಗ ನಡ್ಡಾ ಈ ಟಿಪ್ಸು ನೀಡಿದರೋ? ಇದಾದ ನಂತರ ಯಡಿಯೂರಪ್ಪ ಅವರಿಗೆ ಆರೆಸ್ಸೆಸ್ ನಾಯಕರೊಬ್ಬರ ಹೆಸರು ಕಣ್ಣ ಮುಂದೆ ಬಂದಿದೆ. ಸಂಘಪರಿವಾರದ ನಂಬರ್ ಟೂ ಆಗಿರುವ ಶಿವಮೊಗ್ಗ ಜಿಲ್ಲೆಯ ಈ ನಾಯಕರು ಹೇಳಿದರೆ ಪ್ರಧಾನಿ ಮೋದಿಯವರು ಇಲ್ಲ ಎನ್ನಲಾರರು ಎಂಬ ಲೆಕ್ಕಾಚಾರಕ್ಕೆ ಬಂದ ಯಡಿಯೂರಪ್ಪ ತಕ್ಷಣ ಅವರನ್ನು ಸಂಪರ್ಕಿಸಿದರಂತೆ.
ಅವತ್ತು ಗುಜರಾತ್ ನಲ್ಲಿ ನಡೆಯುತ್ತಿದ್ದ ಆರೆಸ್ಸೆಸ್‌ನ ಸಮನ್ವಯ ಬೈಠಕ್ ನಲ್ಲಿದ್ದ ಈ ನಾಯಕರು ಸಂಪರ್ಕಕ್ಕೆ ಬಂದ ಕೂಡಲೇ ಯಡಿಯೂರಪ್ಪ ತಮ್ಮ ಮನದಿಂಗಿತವನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಸಾರ್, ಕಳೆದ ಅಸೆಂಬ್ಲಿ ಎಲೆಕ್ಷನ್ ಟೈಮಿನಲ್ಲಿ ವಿರೋಧಿಗಳ ಮಾತು ಕೇಳಿ ವರಿಷ್ಟರು ನನ್ನನ್ನು ದೂರವಿಟ್ಟರು. ಪರಿಣಾಮವಾಗಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿತು. ಈಗ ಕೂಡಾ ವರಿಷ್ಟರು ಅದನ್ನೇ ಮಾಡಲು ಹೊರಟಂತಿದೆ. ಪ್ರಬಲ ಲಿಂಗಾಯತ ಸಮುದಾಯವನ್ನು ಕನ್ ಸಾಲಿಡೇಟ್ ಮಾಡಲು ನನ್ನ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೇಳಿದರೆ, ವರಿಷ್ಟರ ಮನಸ್ಸಿನಲ್ಲಿ ಬೇರೆ ಹೆಸರುಗಳಿದ್ದಂತಿದೆ. ಹಾಗೇನಾದರೂ ಆದರೆ ಮುಂದಿನ ಪಾರ್ಲಿಮೆಂಟ್ ಎಲೆಕ್ಷನ್‌ನಲ್ಲೂ ಪಕ್ಷಕ್ಕೆ ಹಾನಿಯಾಗುತ್ತದೆ.
ಹೀಗಾಗಿ ಈಗಲೂ ಮನವಿ ಮಾಡಿಕೊಳ್ಳುತ್ತೇನೆ. ಕರ್ನಾಟಕದಲ್ಲಿ ಪಕ್ಷ ಪುನ: ಪವರ್ ಫುಲ್ಲಾಗಿ ಮೇಲೇಳಬೇಕು ಎಂದರೆ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ವರಿಷ್ಟರಿಗೆ ನೀವು ಹೇಳಬೇಕು. ನವೆಂಬರ್ ಹತ್ತಕ್ಕೂ ಮುನ್ನ ಇದು ಪ್ರಧಾನಿಯವರ ಗಮನಕ್ಕೆ ಬರಬೇಕು. ಒಂದು ವೇಳೆ ಈ ಕೆಲಸವಾಗದಿದ್ದರೆ ನನ್ನ ದಾರಿ ಹಿಡಿಯುವುದು ನನಗೆ ಅನಿವಾರ್ಯವಾಗುತ್ತದೆ ಅಂತ ಯಡಿಯೂರಪ್ಪ ಹೇಳಿದಾಗ, ಸಂಘಪರಿವಾರದ ಆ ನಾಯಕರು ಶ್ಯೂರ್ ಎಂದರಂತೆ.
ಅಂದ ಹಾಗೆ ಸಂಘಪರಿವಾರದ ಈ ನಂಬರ್ ಟೂ ನಾಯಕರಿಗೆ ಯಡಿಯೂರಪ್ಪ ವಿರೋಧಿ ಬಣದ ಬಗ್ಗೆ ಅಸಹನೆ ಇದೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಅವರು ಮೋದಿ-ಷಾ ಜೋಡಿಯ ದಾರಿ ತಪ್ಪಿಸಿದರು. ಆ ಮೂಲಕ ಕರ್ನಾಟಕದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದರು ಎಂಬ ನೋವಿದೆ.
ಹಾಗಂತಲೇ ಯಡಿಯೂರಪ್ಪ ಅವರು ಮಾತನಾಡಿದ ನಂತರ ಈ ನಾಯಕರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಗೆ ಮೆಸೇಜು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ವಿಜಯೇಂದ್ರ ಅವರನ್ನು ಬಿಟ್ಟು ಇನ್ಯಾರನ್ನೇ ಅಧ್ಯಕ್ಷ ಸ್ಥಾನಕ್ಕೆ ತಂದರೂ ಫೇಲ್ ಆಗುತ್ತೇವೆ. ಹೀಗಾಗಿ ನನ್ನ ಮೆಸೇಜನ್ನು ಪ್ರಧಾನಿಯವರಿಗೆ ಮುಟ್ಟಿಸಿ ಎಂದಿದ್ದಾರೆ.
ಅವರ ಈ ಮೆಸೇಜು ನವೆಂಬರ್ ಹತ್ತರ ಶುಕ್ರವಾರ ಬಿಡುವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕಿವಿಗೆ ತಲುಪಿದೆ. ಯಾವಾಗ ಅದು ತಲುಪಿತೋ? ಇದಾದ ನಂತರ ಮೋದಿಯವರು ತುಂಬ ಯೋಚಿಸಲು ಹೋಗಲಿಲ್ಲವಂತೆ.
ಹೀಗಾಗಿ ಕರ್ನಾಟಕದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ಅವರನ್ನು ತರುವ ಪ್ರಪೋಸಲ್ಲನ್ನು ಅವರು ಕ್ಲಿಯರ್ ಮಾಡಿದ್ದಾರೆ. ಅಲ್ಲಿಗೆ ನಿರ್ಣಾಯಕ ಘಟ್ಟದಲ್ಲಿ ಯಡಿಯೂರಪ್ಪ ಮಾಡಿದ ಆಪರೇಷನ್ನು ವರ್ಕ್ ಔಟ್ ಆದಂತಾಗಿದೆ.
ಅಮಿತ್ ಷಾ ಮ್ಯಾಜಿಕ್ ನಡೆದಿಲ್ಲ
ಯಾವಾಗ ವಿಜಯೇಂದ್ರ ಅವರನ್ನು ಕರ್ನಾಟಕದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಆದೇಶ ಹೊರಬಿತ್ತೋ? ಇದಾದ ನಂತರ ಯಡಿಯೂರಪ್ಪ ವಿರೋಧಿ ಬಣ ಮಂಕಾಗಿ ಹೋಗಿದೆ.
ವಸ್ತುಸ್ಥಿತಿ ಎಂದರೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಬಂದು ಕೂರುತ್ತಾರೆ ಅಂತ ಭಾವಿಸಿದ್ದ ಈ ಬಣಕ್ಕೆ ಕೊನೆಯ ಕ್ಷಣಗಳಲ್ಲಿ, ಸೋಮಣ್ಣ ಇಲ್ಲವೇ ಬಸವನಗೌಡ ಪಾಟೀಲ್ ಯತ್ನಾಳ್ ಪೈಕಿ ಒಬ್ಬರು ಅಧ್ಯಕ್ಷರಾಗುತ್ತಾರೆ ಎಂಬ ಮೆಸೇಜು ಇತ್ತು.
ಈ ಪೈಕಿ ಶೋಭಾ ಕರಂದ್ಲಾಜೆ ಖುದ್ದು ಪ್ರಧಾನಿಯವರ ಕ್ಯಾಂಡಿಡೇಟು, ಸೋಮಣ್ಣ ಅವರಾದರೆ ಅಮಿತ್ ಷಾ ಅವರ ಕ್ಯಾಂಡಿಡೇಟು. ಹೀಗಾಗಿ ಯಾರೇ ಅಧ್ಯಕ್ಷರಾದರೂ ತಾವು ಗೆದ್ದಂತೆ ಎಂದು ಭಾವಿಸಿದ್ದ ಈ ಬಣ ಈಗ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗಿದೆ.
ಕಾರಣ? ಇವತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದು ಕುಳಿತಿರುವ ವಿಜಯೇಂದ್ರ ಹೇಳಿ ಕೇಳಿ ಪಕ್ಷದ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕ್ಯಾಂಡಿಡೇಟು. ಹೀಗೆ ಮೋದಿ ಮತ್ತು ಅಮಿತ್ ಷಾ ಅವರ ಕ್ಯಾಂಡಿಡೇಟುಗಳು ಹಿಂದೆ ಸರಿದು ನಡ್ಡಾ ಅವರ ಕ್ಯಾಂಡಿಡೇಟು ಮುಂದೆ ಬಂದಿದ್ದಾರೆ ಎಂದರೆ ಪಕ್ಷ ಮತ್ತೆ ಯಡಿಯೂರಪ್ಪ ಅವರ ಕೈಗೆ ಹೋಯಿತೆಂದೇ ಅರ್ಥ.
ಹಾಗೆಂಬ ತೀರ್ಮಾನಕ್ಕೆ ಬಂದ ನಂತರ ಕರ್ನಾಟಕದಲ್ಲಿ ಸಕ್ರಿಯವಾಗಿರುವ ಯಡಿಯೂರಪ್ಪ ವಿರೋಧಿ ಬಣ ಮೌನಕ್ಕೆ ಶರಣಾಗಿದೆ.
ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಇತ್ತೀಚೆಗೆ ಅಮಿತ್ ಷಾ ಅವರ ಮಾತು ನಡೆಯುತ್ತಿಲ್ಲ ಎಂಬುದು ನಿಜ. ಈ ಹಿಂದೆ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ಸಂದರ್ಭದಲ್ಲಿ ಅಮಿತ್ ಷಾ ಈ ಹುದ್ದೆಗೆ ಪರ್ಯಾಯ ನಾಯಕನನ್ನು ಪತ್ತೆ ಮಾಡಿದ್ದರು.
ಹೀಗೆ ಅವರು ಪತ್ತೆ ಮಾಡಿದ ಪರ್ಯಾಯ ನಾಯಕನ ಹೆಸರು ಮುರುಗೇಶ್ ನಿರಾಣಿ. ಅವತ್ತು ಗಣಿ ಸಚಿವರಾಗಿದ್ದ ನಿರಾಣಿ ಅವರನ್ನು ಅಮಿತ್ ಷಾ ಯಾವ ಮಟ್ಟದಲ್ಲಿ ಬೆಂಬಲಿಸಿದ್ದರು ಎಂದರೆ ನಾಗ್ಪುರದಿಂದ ಹಿಡಿದು ದಿಲ್ಲಿಯ ಪಡಸಾಲೆಗಳ ತನಕ ನಿರಾಣಿಯವರ ಹೆಸರು ತೇಲಾಡಿತ್ತು.
ಆದರೆ ನಿರ್ಣಾಯಕ ಹಂತದಲ್ಲಿ ನಿರಾಣಿ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಸೆಟ್ಲ್ ಮಾಡಬೇಕಾದ ಅಮಿತ್ ಷಾ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗಿದ್ದರು. ಕಾರಣ? ಯಡಿಯೂರಪ್ಪ ಅವರ ಜಾಗಕ್ಕೆ ಬಸವರಾಜ ಬೊಮ್ಮಾಯಿ ಅವರನ್ನೇ ತರಬೇಕು ಅಂತ ಪ್ರಧಾನಿ ಮೋದಿ ತೆಗೆದುಕೊಂಡ ತೀರ್ಮಾನ.
ಇದಾದ ನಂತರ ಕರ್ನಾಟಕದಲ್ಲಿ ಯಡಿಯೂರಪ್ಪ ವಿರೋಧಿ ಬಣದ ಶಕ್ತಿಯನ್ನು ಹೆಚ್ಚಿಸಿದ್ದ ಅಮಿತ್ ಷಾ ಅವರು, ವಿಧಾನಸಭಾ ಚುನಾವಣೆಯ ರಣತಂತ್ರವನ್ನು ನಾನೇ ಹೆಣೆಯುತ್ತೇನೆ ಅಂತ ಹೇಳಿ ರಣಾಂಗಣಕ್ಕಿಳಿದಿದ್ದರು.
ಆದರೆ ಧರ್ಮಾಧಾರಿತ ರಾಜಕಾರಣವನ್ನು ಕೇಂದ್ರವಾಗಿಸಿಕೊಂಡ ರಾಜ್ಯಗಳಲ್ಲಿ ನಡೆದಂತೆ ಜಾತಿ ಆಧಾರಿತ ರಾಜಕಾರಣವನ್ನು ಕೇಂದ್ರವಾಗಿಟ್ಟುಕೊಂಡ ಕರ್ನಾಟಕದಲ್ಲಿ ಅಮಿತ್ ಷಾ ತಂತ್ರ ವರ್ಕ್ ಔಟ್ ಆಗಲಿಲ್ಲ.
ಈ ಸಲ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ವಿಷಯ ಬಂದಾಗಲೂ ಯಡಿಯೂರಪ್ಪ ವಿರೋಧಿ ಬಣದ ಮಾತು ಕೇಳಿದ ಅಮಿತ್ ಷಾ ಅವರು, ವಿ.ಸೋಮಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡೋಣ. ಏನಾಗುತ್ತದೋ ನೋಡೇ ಬಿಡೋಣ ಅಂತ ಮೂರು ತಿಂಗಳ ಹಿಂದೆ ಹೇಳಿದ್ದರಂತೆ.
ಆದರೆ ಅವರ ಮಾತಿನಿಂದ ಗಾಬರಿ ಬಿದ್ದ ನಡ್ಡಾ ಅವರು, ಬೇಡ ಸಾರ್, ಈಗಾಗಲೇ ಒಂದು ಸಲ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದ ಫಲವಾಗಿ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಸೋತಿದ್ದೇವೆ. ಈಗ ಪುನ: ಅವರನ್ನು ನಿರ್ಲಕ್ಷಿಸುವ ಕೆಲಸವಾದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಡ್ಯಾಮೇಜ್ ಆಗುತ್ತದೆ. ಅಸೆಂಬ್ಲಿ ಎಲೆಕ್ಷನ್ನಿನಲ್ಲಾದ ಡ್ಯಾಮೇಜನ್ನು ಹೇಗೋ ಭರಿಸಬಹುದು. ಆದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಡ್ಯಾಮೇಜ್ ಆದರೆ ಅದನ್ನು ರಿಕವರ್ ಮಾಡಿಕೊಳ್ಳುವುದು ಕಷ್ಟ ಎಂದಿದ್ದರಂತೆ.
ಅರ್ಥಾತ್, ಇವತ್ತು ಕರ್ನಾಟಕದ ವಿಷಯದಲ್ಲಿ ಅಮಿತ್ ಷಾ ಅವರು ಏನೇ ಹೇಳಲಿ, ಆದರೆ ಅದರ ಆಧಾರದ ಮೇಲೆ ದಿಲ್ಲಿಯ ಬಿಜೆಪಿ ನಾಯಕರು ತಕ್ಷಣ ಒಂದು ತೀರ್ಮಾನಕ್ಕೆ ಬರುತ್ತಿಲ್ಲ.
ನಿಟ್ಟುಸಿರು ಬಿಟ್ಟರಂತೆ ಕರಂದ್ಲಾಜೆ
ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ವಿಜಯೇಂದ್ರ ಅವರಿಗೆ ದಕ್ಕಿ, ತಮ್ಮ ಕೈ ತಪ್ಪಿದ್ದರಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರಂತೆ.
ವಸ್ತುಸ್ಥಿತಿ ಎಂದರೆ ಕೇಂದ್ರದ ಮಂತ್ರಿಗಿರಿಯನ್ನು ಬಿಟ್ಟು ಕರ್ನಾಟಕಕ್ಕೆ ಬಂದು ಸೆಟ್ಲಾಗುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಪಕ್ಷದಲ್ಲಿರುವ ಬಣ ಸಂಘರ್ಷ ತಮ್ಮ ವಿರೋಧಿಯೊಬ್ಬರನ್ನು ಈ ಜಾಗದಲ್ಲಿ ತಂದು ಕೂರಿಸಬಾರದು ಎಂಬ ಕಾರಣಕ್ಕಾಗಿ ಯಡಿಯೂರಪ್ಪ ಕೈಗೊಂಡ ತೀರ್ಮಾನಕ್ಕೆ ಅವರು ತಲೆಬಾಗಿದ್ದರು.
ಅಂದ ಹಾಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಂದು ಕೂರುವುದು ಎಂದರೆ ನಿರಂತರ ಸಂಘರ್ಷಗಳಿಗೆ ತಲೆ ಒಡ್ಡುವುದು ಎಂಬುದು ಶೋಭಾ ಕರಂದ್ಲಾಜೆಯವರಿಗೆ ಗೊತ್ತೇ ಇತ್ತು. ಹೀಗಾಗಿ ಪ್ರಧಾನಿ ಮೋದಿಯವರು ತಮ್ಮನ್ನು ಕರೆಸಿದಾಗ, ದಯವಿಟ್ಟು ನನಗೆ ಈ ಜವಾಬ್ದಾರಿ ಬೇಡ ಸಾರ್ ಅಂತ ಕೇಳಿಕೊಂಡಿದ್ದರಂತೆ.
ಆದರೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಶಕ್ತಿಯನ್ನು ಒಗ್ಗೂಡಿಸುವ ವಿಷಯದಲ್ಲಿ ಶೋಭಾ ಕರಂದ್ಲಾಜೆ ಮಾಡಿದ ಕೆಲಸವನ್ನು ಬಲ್ಲ ಮೋದಿಯವರು, ನೋ, ನೋ, ಒಬ್ಬ ಮಹಿಳೆ ಕರ್ನಾಟಕದ ರಾಜ್ಯಾಧ್ಯಕ್ಷರಾದರೆ ಪಕ್ಷದ ಇಮೇಜು, ಪವರ್ ಹೆಚ್ಚಾಗುತ್ತದೆ. ಬಿ ರೆಡಿ ಎಂದಿದ್ದರಂತೆ.
ಆದರೆ ಯಾವಾಗ ಸಂಘ ಪರಿವಾರದ ನಂಬರ್ ಟೂ ನಾಯಕರ ಮಾತು ವರ್ಕ್ ಔಟ್ ಆಗಿ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಪಕ್ಕಾ ಆಯಿತೋ? ಇದಾದ ನಂತರ ಶೋಭಾ ಕರಂದ್ಲಾಜೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.