ಸೋಲನ್ನು ಮರೆತು ಮುನ್ನುಗ್ಗುತ್ತೇವೆ : ವಿಜಯೇಂದ್ರ ಯಡಿಯೂರಪ್ಪ
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಗೆಲುವು ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತದ ಗುರಿ ನಮ್ಮ ಮುಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ತಿಳಿಸಿದರು.
ಮೈಸೂರು ಪ್ರವಾಸದಲ್ಲಿರುವ ಅವರು ಇಂದು ಕೆ.ಆರ್.ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಮ್ಮ ಮುಂದೆ 2 ಗುರಿಗಳಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಬೇಕಾಗಿದೆ. ಹಿಂದೆ ಕರ್ನಾಟಕ ಎಂದರೆ ದಕ್ಷಿಣ ಭಾರತದ ಬಿಜೆಪಿಯ ಭದ್ರಕೋಟೆ ಎಂದು ಮಾತನಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಕರ್ನಾಟಕವು ಬಿಜೆಪಿಗೆ ದಕ್ಷಿಣ ಭಾರತದ ಭದ್ರಕೋಟೆಯಾಗಿ ಪರಿವರ್ತನೆ ಆಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಬೇಕಿದೆ ಎಂದು ತಿಳಿಸಿದರು.
ಸಂಘಟನೆಗೆ ಬಲ ಕೊಟ್ಟು ಗುರಿ ತಲುಪಲು ಶ್ರಮ
ನಾಡಿನ ರೈತರು, ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡುವ ಕೆಲಸ ಬಿಜೆಪಿಯ ನೇತೃತ್ವದಲ್ಲಿ ಆಗಬೇಕಿದೆ. ಸಂಘಟನೆಗೆ ಬಲ ಕೊಟ್ಟು ಈ ಗುರಿ ತಲುಪಲು ಶ್ರಮಿಸಲಿದ್ದೇವೆ ಎಂದು ವಿವರಿಸಿದರು.
ಕೆ.ಆರ್.ಪೇಟೆಯ ಬೂಕನಕೆರೆ ಪೂಜ್ಯ ತಂದೆಯವರಿಗೆ ಜನ್ಮ ಕೊಟ್ಟ ಸ್ಥಳ. ತದನಂತರದಲ್ಲಿ ಕಾರ್ಯಕರ್ತರ ಪರಿಶ್ರಮದಿಂದ ಒಂದು ಐತಿಹಾಸಿಕ ವಿಜಯವನ್ನು ಈ ಕ್ಷೇತ್ರವು ಬಿಜೆಪಿಗೆ ನೀಡಿದೆ. ಕಳೆದ ಚುನಾವಣೆಯಲ್ಲಿ ಸ್ವಲ್ಪ ಬದಲಾವಣೆಗಳು ಆಗಿದೆ. ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ನಾವು ಗೆಲ್ಲಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಿದರು.
ಸೋಲೇ ಗೆಲುವಿನ ಸೋಪಾನ
ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಸೋಲೇ ಗೆಲುವಿನ ಸೋಪಾನ. ಸೋಲನ್ನು ಮರೆತು ಮುನ್ನುಗ್ಗುತ್ತೇವೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ಒತ್ತು ಕೊಡುತ್ತೇವೆ. ಪಕ್ಷಕ್ಕೆ ಶಕ್ತಿ ತುಂಬುವ ಕಾರ್ಯ ಮಾಡುತ್ತೇವೆ. ಆ ಮೂಲಕ ಯಶಸ್ಸನ್ನು ಸಾಧಿಸಲಿದ್ದೇವೆ ಎಂದು ಅವರು ತಿಳಿಸಿದರು.
ಸವಾಲಿದ್ದಾಗಲೇ ನಾಯಕನ ಪರೀಕ್ಷೆ ಆಗುತ್ತದೆ. ತಂದೆಯವರ ರಾಜಕೀಯ ಜೀವನದಲ್ಲಿ ಸವಾಲು, ಕಲ್ಲುಮುಳ್ಳಿನ ಹಾದಿ ಇದ್ದದನ್ನು ಹತ್ತಿರದಿಂದ ನೋಡಿದ್ದೇನೆ. ಏನೇ ಸಮಸ್ಯೆ ಬಂದರೂ ಅವನ್ನು ಸುಲಲಿತವಾಗಿ ಬಗೆಹರಿಸಿ, ಎಲ್ಲ ಹಿರಿಯರ ಆಶೀರ್ವಾದದಿಂದ, ಮಾರ್ಗದರ್ಶನದೊಂದಿಗೆ ಮುಂದೆ ಸಾಗುವೆ ಎಂದು ಅವರು ನುಡಿದರು.
ಯಾರ ಸಾಮರ್ಥ್ಯ ಎಷ್ಟೆಂಬುದನ್ನು ಆಡಳಿತ ಪಕ್ಷ ತೀರ್ಮಾನ ಮಾಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನರು ಅದನ್ನು ತೀರ್ಮಾನ ಮಾಡುತ್ತಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿರಿಯ ನಾಯಕರು. ಅವರ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರಿದ್ದಾರೆ. ಯತ್ನಾಳ್ ಅವರು ನೋವಿನಿಂದ ಕೆಲವು ಸಮಸ್ಯೆಗಳನ್ನು ಹೇಳಿಕೊಂಡಿರಬಹುದು. ಎಲ್ಲವನ್ನೂ ಕೇಂದ್ರದ ವರಿಷ್ಠರು, ಹಿರಿಯರು ಕುಳಿತು ಸಮಾಲೋಚನೆ ಮಾಡಿ ಉತ್ತರ ಕಂಡುಕೊಳ್ಳಲಿದ್ದೇವೆ. ಅವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಉತ್ತರಿಸಿದರು.