ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು
ಬೆಂಗಳೂರು:ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕೆಂಬ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂಬುದು ವಿವಿಧ ಸಮುದಾಯಗಳ ಆಗ್ರಹವಾಗಿದೆ ಎಂದರು.
ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳವರು ಪಕ್ಷಬೇಧ ಮರೆತು ಹೋರಾಟ ಮಾಡುತ್ತಿದ್ದಾರೆ, ಕೆಲವು ಸಮುದಾಯಗಳು, ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ತಮ್ಮನ್ನು ಸಂಪರ್ಕಿಸಿಲ್ಲ, ಸಮೀಕ್ಷೆ ವೈಜ್ಞಾನಿಕವಾಗಿ ನಡೆಯಬೇಕು ಎನ್ನುತ್ತಿದ್ದಾರೆ.
ಸಮೀಕ್ಷೆ ವೈಜ್ಞಾನಿಕವಾಗಿ ನಡೆಯಬೇಕು
ನಾನೂ ಸಹಾ ರಾಜಕೀಯ ಪಕ್ಕಕ್ಕಿಟ್ಟು, ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕೆಂಬ ಕಾರಣದಿಂದ ಸಭೆಯಲ್ಲಿ ಭಾಗವಹಿಸಿದ್ದೇನೆ, ಈ ಅಭಿಮಾನ ಎಲ್ಲಾ ಸಮುದಾಯದ ನಾಯಕರಲ್ಲೂ ಇರುತ್ತದೆ ಎಂದರು.
ನಿಗಮ-ಮಂಡಳಿ:೨೮ಕ್ಕೆ ಮತ್ತೊಂದು ಸುತ್ತಿನ ಸಭೆ
ನಿಗಮ-ಮಂಡಳಿಗೆ ನೇಮಕ ಕುರಿತಂತೆ ಹಿರಿಯ ನಾಯಕರು, ಶಾಸಕರ ಅಭಿಪ್ರಾಯ ಪಡೆಯುತ್ತಿದ್ದೇವೆ, ೨೮ರಂದು ಪಕ್ಷದ ದೆಹಲಿ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದು ನಂತರ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸುತ್ತೇವೆ ಎಂದರು.
ಮಂತ್ರಿಗಿರಿ ಸಿಗದ ಹಿರಿಯ ಶಾಸಕರಿಗೆ ನಿಗಮ -ಮಂಡಳಿ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದರು.