ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಅಧಿಕಾರಾವಧಿ ಒಂದು ತಿಂಗಳ ಮಟ್ಟಿಗೆ ವಿಸ್ತರಣೆ
ಬೆಂಗಳೂರು: ಜಾತಿ ಗಣತಿಗೆ ವೀರಶೈವ-ಲಿಂಗಾಯತ, ಒಕ್ಕಲಿಗ ಸಮುದಾಯಗಳ ತೀವ್ರ ವಿರೋಧಕ್ಕೆ ತಲೆಬಾಗಿರುವ ರಾಜ್ಯ ಸರ್ಕಾರವು ಆಂತರಿಕವಾಗಿ ಕೆಲವು ಬದಲಾವಣೆ ಮಾಡಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಅವರ ಅಧಿಕಾರಾವಧಿಯನ್ನು ಒಂದು ತಿಂಗಳ ಮಟ್ಟಿಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ನೀಡಿರುವ ವರದಿಯಲ್ಲಿ ಲಿಂಗಾಯತ, ಒಕ್ಕಲಿಗ ಸೇರಿದಂತೆ ಮುಂದುವರೆದ ಜಾತಿಗಳನ್ನು ಆಂತರಿಕವಾಗಿ ವಿಭಜಿಸಿ ಸಮುದಾಯಗಳನ್ನು ಗುಂಪುಗಳಾಗಿ ಒಡೆಯಲಾಗಿತ್ತು. ಇದರಿಂದ ಈ ಎರಡೂ ಸಮುದಾಯಗಳು ಇತರ ಸಮುದಾಯಗಳಿಗಿಂತ ಅಂಕಿ-ಸಂಖ್ಯೆಯಲ್ಲಿ ಕೆಳಮಟ್ಟಕ್ಕೆ ಹೋಗಿದ್ದವು ಎಂಬ ಆರೋಪಗಳಿವೆ.
ಶಾಶ್ವತ ಆಯೋಗ ನೀಡಿರುವ ವರದಿಯ ಅಂಕಿ-ಅಂಶಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಸಮುದಾಯಗಳ ಆಂತರಿಕ ವಿಂಗಡಣೆಯನ್ನು ತಪ್ಪಿಸಿ ಸಮುದಾಯವನ್ನು ಒಟ್ಟಾಗಿ ಪರಿಗಣಿಸಲಾಗುವುದು.
ಸಾಮಾಜಿಕ-ಆರ್ಥಿಕ-ಶೈಕ್ಷಿಣಿಕ ವರದಿ ಅನುಷ್ಟಾನಕ್ಕೆ ಆಸಕ್ತಿ
ಕಳೆದ ಎಂಟು ವರ್ಷಗಳ ಹಿಂದೆಯೇ ವರದಿ ಸೋರಿಕೆಯಾಗಿ ಈ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಮತ್ತೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹಿಂದಿನ ಆಡಳಿತಾವಧಿಯಲ್ಲಿ ಸಿದ್ಧಗೊಂಡಿರುವ ಸಾಮಾಜಿಕ-ಆರ್ಥಿಕ-ಶೈಕ್ಷಿಣಿಕ ವರದಿಯನ್ನು ಅನುಷ್ಟಾನಗೊಳಿಸಲು ಆಸಕ್ತಿ ತೋರಿದರು.
ಶಾಶ್ವತ ಆಯೋಗದ ಹಾಲಿ ಅಧ್ಯಕ್ಷರು ನೀಡುವ ವರದಿಯನ್ನು ಸ್ವೀಕರಿಸಿ ಅನುಷ್ಟಾಗೊಳಿಸುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷಾತೀತವಾಗಿ ಈ ಸಮುದಾಯಗಳ ಜನಪ್ರತಿನಿಧಿಗಳು ಮತ್ತು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಸಹೋದ್ಯೋಗಿಗಳೇ ಅಪಸ್ವರ ಎತ್ತಿ ಕಾಂತರಾಜ್ ವರದಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಅನುಷ್ಟಾಗೊಳಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ತಂದರು.
ಸಚಿವ ಸಂಪುಟದ ಉಪಸಮಿತಿ ರಚನೆಗೆ ನಿರ್ಧಾರ
ಲೋಕಸಭಾ ಚುನಾವಣೆ ಸನಿಹದಲ್ಲಿ ಜಾತಿ ಕಲಹಕ್ಕೆ ಅವಕಾಶ ಮಾಡಿಕೊಡಬಾರದು ಮತ್ತು ಸರ್ಕಾರದ ನಿಲುವು ಅಚಲವಾಗಿರಬೇಕೆಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಅವರು ಉಂಟಾಗಿರುವ ಲೋಪದೋಷವನ್ನು ಸರಿಪಡಿಸಲು ಆಯೋಗದ ಅಧ್ಯಕ್ಷರ ಅವಧಿಯನ್ನು ವಿಸ್ತರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವರದಿ ಬಂದ ನಂತರ ಸಚಿವ ಸಂಪುಟದ ಉಪಸಮಿತಿ ರಚಿಸಿ ಆ ಸಮಿತಿಗೆ ತಜ್ಞರ ನೇಮಕ ಮಾಡಿ, ಅವರು ನೀಡುವ ವರದಿಯನ್ನು ಆಧರಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಸಮಾಜದ ಎಲ್ಲಾ ವರ್ಗಗಳಲ್ಲಿ ಇರುವ ಕಡುಬಡವರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಉಪಸಮಿತಿ ತೀರ್ಮಾನ ಮಾಡಲಿದೆ.
ಸರ್ಕಾರಿ ಸೌಲಭ್ಯಗಳು ಉಳ್ಳವರಿಗೇ ದೊರೆಯುತ್ತದೆ ಎಂಬ ಅಪವಾದದಿಂದ ದೂರವಾಗಿ ಸಾಮಾಜಿಕ-ಆರ್ಥಿಕ-ಶೈಕ್ಷಣಿಕವಾಗಿ ಹಿಂದುಳಿದ ಎಲ್ಲರಿಗೂ ಶಿಕ್ಷಣ, ಉದ್ಯೋಗ ಹಾಗೂ ಸರ್ಕಾರಿ ಸವಲತ್ತುಗಳನ್ನು ದೊರೆಯುವಂತೆ ಮಾಡಲು ಉಪಸಮಿತಿ ಶಿಫಾರಸು ಮಾಡಲಿದೆ.