ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು
ಬೆಂಗಳೂರು:ವಿ.ವಿ.ಪುರಂನ ಭಗವಾನ್ ಮಹಾವೀರ ಜೈನ್ ಕಾಲೇಜಿನ “ಹೊಂಗಿರಣ ಕನ್ನಡ ವೇದಿಕೆ”ಯು ಕನ್ನಡ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿತು. ವೀರಗಾಸೆ ಹಾಗೂ ವಾದ್ಯ ಘೋಷದೊಂದಿಗೆ ಮುಖ್ಯ ಅತಿಥಿಗಳಾದ ಗುರುಕಿರಣ್ ರವರನ್ನು ಪ್ರೀತಿಯಿಂದ ಸ್ವಾಗತಿಸಿದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕರ್ನಾಟಕದ ಕನ್ನಡಿಗರ ಹಿರಿಮೆ ಗರಿಮೆಯನ್ನು ವಿದ್ಯಾರ್ಥಿಗಳು ಬಹಳ ಅರ್ಥಪೂರ್ಣವಾಗಿ ನಿರೂಪಿಸಿದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅತ್ಯುತ್ತಮ ಸಂಗೀತ ನಿರ್ದೇಶಕ, ಫಿಲಂ ಫೇರ್ ಅವಾರ್ಡ್, ಕರ್ನಾಟಕ ಚಲನಚಿತ್ರ ಪ್ರಶಸ್ತಿ ವಿಜೇತ ಕರಾವಳಿಯ ಕಲಾ ಪ್ರತಿಭೆ ಗುರುಕಿರಣ್ ರವರು ತಮ್ಮ ಮನದಾಳದ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದದ್ದು, ನಮ್ಮ ಕಲೆ ಸಾಹಿತ್ಯ ಸಂಸ್ಕೃತಿಗಳನ್ನು ನಾವು ಉಳಿಸಿ ಬೆಳೆಸಬೇಕು ಎಂದು ಹೇಳುತ್ತಾ ತಮ್ಮ ಸತ್ಯಸಾಯಿ ಕಾಲೇಜಿನ ಅನುಭವವನ್ನು ಹಂಚಿಕೊಂಡರು.
ಹಾಗೆಯೇ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ರವರ ನಡುವಿನ ಬಾಂಧವ್ಯವನ್ನು ಮೆಲುಕು ಹಾಕಿದರು. ತಮ್ಮ ಅದ್ಭುತ ಕಂಠ ಸಿರಿಯಿಂದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡನ್ನು ಹಾಡಿ ಇಡೀ ಜೈನ್ ಕಾಲೇಜಿನಲ್ಲಿ ಮಧುರ ವಾತಾವರಣವನ್ನು ನಿರ್ಮಿಸಿದರು.
ಪ್ರಾಂಶುಪಾಲರು ಸರ್ವರನ್ನು ಸ್ವಾಗತಿಸಿದರು. ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಹಾಡು, ನೃತ್ಯ, ಯಕ್ಷಗಾನ, ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕ ವೃಂದವನ್ನು ರಂಜಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕ ಮಿತ್ರರು ವಿದ್ಯಾರ್ಥಿಗಳು ಭಾಗಿಯಾಗಿ ನಮ್ಮ ಹೆಮ್ಮೆಯ ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಒಟ್ಟಾರೆ ಎಲ್ಲವೂ ಕನ್ನಡಮಯವಾಗಿತ್ತೆಂಬುದೇ ವಿಶೇಷ ಸಂಗತಿ.