ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಒತ್ತಾಯ
ಬೆಂಗಳೂರು:ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸ್ವೀಕರಿಸಿ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಇಂದಿಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರದ ಆದೇಶದಂತೆ ನೇಮಕಗೊಂಡಿದ್ದ ನನ್ನ ನೇತೃತ್ವದ ಅಂದಿನ ಸಮಿತಿ, ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿತ್ತು. ಇದುವರೆಗೂ ಸಮೀಕ್ಷೆಗೆ ಸಂಬಂಧಪಟ್ಟ ವರದಿಯನ್ನ ಆಯೋಗದಿಂದ ರಾಜ್ಯ ಸರ್ಕಾರ ಪಡೆದುಕೊಳ್ಳಲಿಲ್ಲ.
ಸಾಮಾಜಿಕ ಮತ್ತು ಶೈಕ್ಷಿಣಿಕ ಸಮೀಕ್ಷೆ ತಯಾರಿಸಿದ ಮೇಲೆ ಹೆಸರಿಸಲಾದ ಎಲ್ಲಾ ವರದಿಗಳನ್ನು ಸರ್ಕಾರ ಸ್ವೀಕರಿಸಿ ಜಾರಿಗೊಳಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ವರದಿ ಮೂಲ ಪ್ರತಿ ಕಳೆದು ಹೋಗಿಲ್ಲ
ಆಯೋಗದ ಅಂದಿನ ಸದಸ್ಯರ ಜೊತೆಗೂಡಿ ಮಾತನಾಡಿದ ಅವರು, ವರದಿ ಕಳೆದು ಹೋಗಿಲ್ಲ, ಮೂಲ ಪ್ರತಿಯನ್ನು ಆಯೋಗದ ಕಚೇರಿಯ ಪೆಟ್ಟಿಗೆಯಲ್ಲಿ ಸೀಲ್ ಮಾಡಿ ಇಡಲಾಗಿತ್ತು.
ವರದಿ ಸಿದ್ಧಪಡಿಸುವಾಗ ನಡೆದ ಎಲ್ಲ ಸಭೆಗಳಲ್ಲೂ ತೆಗೆದುಕೊಂಡ ನಿರ್ಧಾರಗಳಿಗೆ ಒಮ್ಮತದಿಂದ ಸದಸ್ಯರೂ ಮತ್ತು ಕಾರ್ಯದರ್ಶಿಗಳು ಸಹಿ ಮಾಡಿದ್ದಾರೆ.
ಸಭೆ ತೀರ್ಮಾನಗಳೇ ಅಂತಿಮ
ಮುದ್ರಿತಗೊಂಡ ಅಂತಿಮ ಪ್ರತಿಗೆ ಕಾರ್ಯದರ್ಶಿಗಳು ಸಹಿ ಮಾಡಿಲ್ಲ, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳೇ ಅಂತಿಮ ಮುದ್ರಿತ ಪ್ರತಿಯಲ್ಲ ಎಂದು ಕಾರ್ಯದರ್ಶಿ ಸಹಿ ಇಲ್ಲದಿರುವುದನ್ನು ಸಮರ್ಥಿಸಿಕೊಂಡರು.
ಮೂಲ ಪ್ರತಿ ಕಳೆದು ಹೋಗಿದೆ ಎಂಬುದಕ್ಕೂ ನಮಗೂ ಸಂಬಂಧವಿಲ್ಲ, ಅದು ಆಯೋಗಕ್ಕೆ ಬಿಟ್ಟ ವಿಚಾರ, ನಾವು ಏನು ಸಿದ್ಧಪಡಿಸಿದ್ದೆವೋ ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಹಾಲಿ ಅಧ್ಯಕ್ಷರಿಗೆ ಅಧಿಕಾರವಿಲ್ಲ.
ನಮ್ಮ ವರದಿಯನ್ನು ಯಥಾವತ್ತಾಗಿ ಸ್ವೀಕರಿಸಿ ಸಾರ್ವಜನಿಕರ ಮುಂದಿಡಬೇಕು, ನಂತರ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಬೇಕು.
ಹಾಲಿ ಅಧ್ಯಕ್ಷರು ಪ್ರತ್ಯೇಕವಾಗಿ ವರದಿ ನೀಡಲು ಅಧಿಕಾರವಿದೆ, ನಮ್ಮ ಮೂಲ ವರದಿಗೆ ಅವರು ಧಕ್ಕೆ ತರುವಂತಿಲ್ಲ.
ಹಾಲಿ ಅಧ್ಯಕ್ಷರು ಗೊಂದಲಕ್ಕೆ ಸಿಲುಕಿದ್ದಾರೆ
ಹಾಲಿ ಅಧ್ಯಕ್ಷರು ಗೊಂದಲಕ್ಕೆ ಸಿಲುಕಿದ್ದಾರೆ, ಅವರ ಮೇಲೆ ಯಾವ ಒತ್ತಡ ಬಂದಿದೆಯೋ ತಿಳಿಯದು, ಅವರ ಅಭಿಪ್ರಾಯ ಹೇಳಲು ಅವರಿಗೆ ಅಧಿಕಾರವಿದೆ ಎಂದರು.
ಅಂದಿನ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮಾಡಲು ಆದೇಶ ನೀಡಿತ್ತು. ಅದರಂತೆ ನಾವು ಇಡೀ ರಾಜ್ಯದಲ್ಲಿ ಸಮೀಕ್ಷೆ ನಡೆಸಿ ವೈಜ್ಞಾನಿಕ ವರದಿ ಸಿದ್ಧಪಡಿಸಿದ್ದೇವೆ.
ಸಮೀಕ್ಷೆ ಕಾರ್ಯ ಮುಗಿಸುವುದಕ್ಕೂ ಮೊದಲು ರಾಜ್ಯದುದ್ದಕ್ಕೂ ಮನೆ-ಮನೆ ಗಣತಿ ಮಾಡಿ, ಜಾತಿ ಗಣತಿ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಕೌಟುಂಬಿಕ, ಚಿರಾಸ್ತಿ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಒಟ್ಟು 55 ಅಂಶಗಳ ಮಾಹಿತಿಯನ್ನು ಗಣತಿಯಲ್ಲಿ ಆಯೋಗವು ಪಡೆದಿರುತ್ತದೆ.
ರಾಜ್ಯಮಟದಲ್ಲಿ ವಿಶಾಲವಾದ ಸಮೀಕ್ಷೆ
ಇದು ಬರೀ ಜಾತಿಯನ್ನಷ್ಟೇ ಗುರುತಿಸುವ ಸಮೀಕ್ಷೆಯಲ್ಲ, 1931ರಲ್ಲಿ ನಡೆದ ಜಾತಿ ಗಣತಿಯ ನಂತರ ಇಂತಹ ವಿಶಾಲವಾದ ಸಮೀಕ್ಷೆ ರಾಜ್ಯಮಟದಲ್ಲಿ ಇದೇ ಮೊದಲಾಗಿದೆ ಎಂದು ಸಮರ್ಥಿಸಿಕೊಂಡರು.
ವರದಿ ಸಿದ್ಧಗೊಂಡ ನಂತರ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಆ ನಂತರ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಲು ಪತ್ರ ಬರೆದು ಕೇಳಿದೆವಾದರೂ ನಮಗೆ ಸಮಯಾವಕಾಶ ನೀಡಲಿಲ್ಲ.
ಇದೇ ಕಾಲದಲ್ಲಿ ಮುಖ್ಯಕಾರ್ಯದರ್ಶಿ ಅವರಿಗೂ ಪತ್ರ ಬರೆದೆವು. ಅಲ್ಲಿಂದಲೂ ಸ್ಪಂದನೆ ದೊರೆಯಲಿಲ್ಲ. ನಮ್ಮ ಅವಧಿ ಪೂರ್ಣಗೊಂಡ ನಂತರ ಸರ್ಕಾರ ನಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಿತು, ಆ ಸಂದರ್ಭದಲ್ಲಿ ನಾವು ವರದಿಯನ್ನು ಪೆಟ್ಟಿಗೆಯಲ್ಲಿಟ್ಟು ಮೊಹರು ಮಾಡಿ ಬಂದೆವು ಎಂದರು.