ದಕ್ಷಿಣ ಕರ್ನಾಟಕದಲ್ಲಿ ಮೋಡ ಮುಸುಕಿದ ವಾತಾವರಣ
ಬೆಂಗಳೂರು: ಆಗಸದಲ್ಲಿ ದಟ್ಟವಾಗಿ ಆವರಿಸಿರುವ ಮೋಡ. ಆಗಾಗ್ಗೆ ತುಂತುರು ಮಳೆಯ ಸಿಂಚನ; ಜೊತೆಗೆ ತಂಗಾಳಿ. ಈ ವಾತಾವರಣ ಕಳೆದ ಮೂರ್ನಾಲ್ಕು ದಿನಗಳಿಂದ ಮಾಮೂಲಿಯಾಗಿದೆ.
ತಂಪಾದ ಗಾಳಿ ಬೀಸುವುದರಿಂದ ರಾತ್ರಿಯಷ್ಟೇ ಅಲ್ಲ, ಹಗಲಿನಲ್ಲೂ ಮೈ ಕೊರೆಯುವ ಚಳಿಯ ಅನುಭವ ಉಂಟಾಗುತ್ತಿದೆ. ಆಗೊಮ್ಮೆ ಈಗೊಮ್ಮೆ ಬರುವ ತುಂತುರು ಹನಿಗಳು ಚಳಿಯ ತೀವ್ರತೆ ಹೆಚ್ಚು ಮಾಡುತ್ತಿವೆ.
ಮುಂಗಾರಿನಲ್ಲಿ ಮಳೆ ಕೈಕೊಟ್ಟು ಬರದ ಛಾಯೆ ಆವರಿಸಿದ್ದಲ್ಲದೆ, ಬೇಸಿಗೆಯ ಬಿಸಿಲಿನ ಅನುಭವ ಕಂಡಿದ್ದ ಜನರಿಗೆ ಚಳಿಗಾಲದಲ್ಲಿ ಮಳೆ ಕಂಡು ಆಶ್ಚರ್ಯ, ಸಂತೋಷ ಎರಡೂ ಒಟ್ಟಿಗೆ ಉಂಟಾಗಿರಬೇಕು. ಏಕೆಂದರೆ ಈಗಲಾದರೂ ಏಗಾದರೂ ಮಳೆ ಬರಲಿ ಎಂದು ಬಯಸುವವರೇ ಹೆಚ್ಚು.
ಹೀಗಾಗಿ ಮುಂಗಾರು ಮಳೆ ಕೈಕೊಟ್ಟಾಯಿತು. ಹಿಂಗಾರು ಮಳೆ ಆಸರೆಯಾಗಲಿದೆಯೆ? ಎಂಬ ಕಾತರ ಹಲವರಲ್ಲಿ ಇರುವುದು ಸಹಜ. ಆದರೆ, ಹಿಂಗಾರು ಮಳೆಯೂ ರಾಜ್ಯದ ಮೇಲೆ ಕೃಪೆ ತೋರಿಲ್ಲ. ವರುಣನ ಅವಕೃಪೆ ಮುಂದುವರೆದಿದೆ.
ಇಷ್ಟರ ನಡುವೆ ಬಂಗಾಳ ಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮದಿಂದ ತಮಿಳುನಾಡಿನ ಪೂರ್ವ ಕರಾವಳಿ ಹಾಗೂ ಅದಕ್ಕೆ ಹೊಂದಿ ಕೊಂಡಂತಿರುವ ಆಂಧ್ರಪ್ರದೇಶದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ತಂಗಾಳಿಯಿಂದ ಚಳಿಯ ಅನುಭವ ಹೆಚ್ಚು
ವಾಯುಭಾರ ಕುಸಿತ ನೇರ ಪರಿಣಾಮ ಕರ್ನಾಟಕದ ಮೇಲೆ ಅಷ್ಟಾಗಿ ಉಂಟಾಗುವುದಿಲ್ಲ. ಆದರೂ ಮೂರು ದಿನಗಳ ಕಾಲ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣ, ಆಗಾಗ್ಗೆ ತಂಪಾದ ಮೈಲ್ಮೈಗಾಳಿ ಬೀಸಲಿದೆ. ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಇಲ್ಲವೆ, ಹಗುರ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ.
ಉತ್ತರ ಕರ್ನಾಟಕ ಭಾಗದಲ್ಲಿ ಒಣ ಹವೆ ಮುಂದುವರೆಯಲಿದೆ. ಆ ಭಾಗದಲ್ಲಿ ಮಳೆ ಇಲ್ಲ. ಬೆಂಗಳೂರು, ಮೈಸೂರು, ಚಾಮರಾಜನಗರ, ಕೋಲಾರ ಸೇರಿದಂತೆ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಗಳಿವೆ. ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ. ಮುಂಜಾನೆ ಕೆಲವೆಡೆ ಮಂಜು ಕವಿಯ ವಾತಾವರಣ ಕಂಡು ಬರಬಹುದು. ಇದು ನವೆಂಬರ್-ಡಿಸೆಂಬರ್ ತಿಂಗಳ ಸಹಜ ಪ್ರಕ್ರಿಯೆ ಎಂಬು ತಜ್ಞರ ಅಭಿಮತ.