ರೂಪದರ್ಶಿಯರೊಂದಿಗೆ ಹೆಜ್ಜೆ ಹಾಕಿದ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಪ್ರಜ್ವಲ್ ದಂಪತಿ
ಬೆಂಗಳೂರು:ಎಂ.ಜಿ. ಲಿಡೋ ಮಾಲ್ ನಲ್ಲಿ ವಾರಾಂತ್ಯದಲ್ಲಿ ಪ್ಯಾಷನ್ ಲೋಕ ಅನಾವರಣಗೊಂಡಿತ್ತು. 9ನೇ ಆವೃತ್ತಿಯ ವಾರ್ಷಿಕ ಪ್ಯಾಷನ್ ಶೋನಲ್ಲಿ ಹೊಸ ಬ್ಯಾಂಡ್ ಗಳು, ನವನವೀನ ವಸ್ತ್ರವೈಭವ ಕಂಡು ಬಂತು. ಮಾಡೆಲ್ ಗಳೊಂದಿಗೆ ಸ್ಯಾಂಡಲ್ ವುಡ್ ನ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಈ ವರ್ಷದಲ್ಲಿ ಬೆಂಗಳೂರು ನಗರದಲ್ಲಿ ನಡೆದ ಅತ್ಯಂತ ಮನಮೋಹಕ ಪ್ಯಾಷನ್ ಶೋ ಇದಾಗಿದ್ದು, ಪ್ಯಾಷನ್ ವಿನ್ಯಾಸಕ ರಮೇಶ್ ಡೆಬ್ಲಾ ಅವರ ಮಾರ್ಗದರ್ಶನದಲ್ಲಿ ಪ್ಯಾಷನ್ ಶೋ ನಡೆಯಿತು.
ಪ್ರಮುಖ ಬ್ರ್ಯಾಂಡ್ ಗಳಾದ ಮಾರ್ಕ್ಸ್ ಮತ್ತು ಸ್ಪೆನ್ಸರ್, ರೋಸ್ಸೋ ಬರ್ನೆಲ್ಲೋ, ಡಾ ಮಲಿನೋ, ಕ್ಲಾರ್ಕ್ಸ್, ಮ್ಯಾಕ್ ವಿ, ಆಯೇಷಾ, ಜೀವಾ, ಅಜೋರ್ಟೆ, ಅನ್ಸೆರ್ಟಿ, ಅಲ್ಡೋ ಹಿಡೆಸನ್, ಬ್ರಾವಡೋ ಮತ್ತಿತರೆ ವಸ್ತ್ರಗಳನ್ನು ತೊಟ್ಟು ರೂಪದರ್ಶಿಯರು ಗಮನ ಸೆಳೆದರು. ವಸ್ತ್ರಗಳ ಜೊತೆಗೆ ಅತ್ಯುತ್ತಮ ಗುಣಮಟ್ಟದ ಬ್ಯಾಗ್ ಗಳು ಜವ್ವನೆಯರ ಅಂದ ಹೆಚ್ಚಿಸಿತು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, “ಪ್ಯಾಷನ್ ಎಂದರೆ ನಮ್ಮ ಮನಸ್ಸಿಗೆ, ದೇಹಕ್ಕೆ ಮತ್ತು ನಮ್ಮ ಬಜೆಟ್ ಗೆ ಒಪ್ಪುವ ವಸ್ತ್ರಗಳನ್ನು ಖರೀದಿಸಿ ಧರಿಸುವುದಾಗಿದೆ. ಬಟ್ಟೆಗಳನ್ನು ಖರೀದಿಸುವುದೇ ಒಂದು ಸಂಭ್ರಮ” ಎಂದರು.
ನಟಿ ರಾಗಿಣಿ ಮಾತನಾಡಿ “ಪ್ಯಾಷನ್ ಎಂದರೆ ಅದು ಜೀವನ ಕ್ರಮ. ಬದುಕಿನ ಆಕರ್ಷಣೆಯಾಗಿದೆ. ಇದು ಜೀವನ ಪ್ರೀತಿಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.
ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯೊಂದಿಗೆ ಪ್ಯಾಷನ್ ಶೋ
ಒನ್ ಎಂಜಿ ಲಿಡೋ ಮಾಲ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ ಸುಮನ್ ಲರ್ಹಿ ಮಾತನಾಡಿ, “ಪ್ಯಾಷನ್ ಶೋ ನಡೆಸುವುದು ನಮಗೆ ನಿಜಕ್ಕೂ ಅಪ್ಯಾಯಮಾನವಾದ ವಿಷಯ. ಪ್ರತಿವರ್ಷ ಭಿನ್ನ, ವಿಭಿನ್ನ ಪರಿಕಲ್ಪನೆಯೊಂದಿಗೆ ಪ್ಯಾಷನ್ ಶೋ ಆಯೋಜಿಸುತ್ತಾ ಬಂದಿದ್ದೇವೆ.
ಹೊಸ ಬ್ರ್ಯಾಂಡ್ ಗಳನ್ನು ಪರಿಚಯಿಸುವ, ಗ್ರಾಹಕರಿಗೆ ಅಗತ್ಯವಾಗಿರುವ ಆಧುನಿಕ ವಸ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಿದ್ದೇವೆ. ಇದರಿಂದ ವ್ಯಾಪಾರಸ್ಥರು ಮತ್ತು ಗ್ರಾಹಕರ ನಡುವಿನ ಅಂತರವನ್ನು ತಗ್ಗಿಸಲು ಸಹಕಾರಿಯಾಗಲಿದೆ ಎಂದರು.
ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಭಾನು ಪ್ರವೀಣ್ ಮಾತನಾಡಿ, “ಪ್ಯಾಷನ್ ಶೋ ಮೂಲಕ ಅತ್ಯುತ್ತಮ ಬ್ರ್ಯಾಂಡ್ ಗಳನ್ನು ಪರಿಚಯಿಸಲು ಸಹಕಾರಿಯಾಗಲಿದ್ದು, ಜಗತ್ತಿನಾದ್ಯಂತ ಇರುವ ಎಲ್ಲಾ ವಸ್ತ್ರ ವಿಶೇಷಗಳನ್ನು ಈ ಪ್ರದರ್ಶನ ಒಳಗೊಂಡಿದೆ ಎಂದು ಹೇಳಿದರು.