ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ
ಬೆಂಗಳೂರು:ನಿಯೋಜನೆ ಮೇಲೆ ಕೂಡ್ಲಿಗಿ ತಾಲೂಕು ಕಚೇರಿಯಿಂದ ಇತರೆಡೆ ತೆರಳಿರುವ ಅಧಿಕಾರಿಗಳನ್ನು ಶೀಘ್ರ ಹಿಂದಕ್ಕೆ ಕರೆಸಿಕೊಳ್ಳಿ ಎಂದು ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೈ ಅವರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು ಪತ್ರ ಬರೆದು ಆದೇಶಿಸಿದ್ದಾರೆ.
ಸಚಿವ ಕೃಷ್ಣ ಬೈರೇಗೌಡ ಅವರು ಇತ್ತೀಚೆಗೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ತಮ್ಮ ಕೆಲಸಕ್ಕಾಗಿ ಕಚೇರಿಯಲ್ಲಿ ಜನಸಂದಣಿಯೇ ನೆರೆದಿತ್ತು. ಜನರ ಕೆಲಸ ಮಾಡಿಕೊಡಬೇಕಾಗಿದ್ದ, ಮೊದಲ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ನಿಯೋಜನೆ ಮೇಲೆ ಇತರೆಡೆ ತೆರಳಿದ್ದರು.
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಅಲಭ್ಯತೆ
ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಅಲಭ್ಯತೆಯಿಂದಾಗಿ ಜನಸಾಮಾನ್ಯರು ನಿಗದಿತ ಸಮಯದೊಳಗೆ ತಮ್ಮ ಕೆಲಸಗಳಾಗದೆ ಪರಿತಪಿಸುವಂತಾಗಿತ್ತು. ಅಲ್ಲದೆ, ಕಚೇರಿಯಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಅಧಿಕಾರಿಗಳು ಇಲ್ಲದಿರುವ ಕಾರಣ ತಾವು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ಅವರು ಸಚಿವರ ಬಳಿ ದೂರಿದ್ದರು.
ಈ ಬಗ್ಗೆ ತಹಶೀಲ್ದಾರರಾದ ಎಂ. ರೇಣುಕಾ ಅವರ ಬಳಿ ಸಚಿವ ಕೃಷ್ಣ ಬೈರೇಗೌಡ ಅವರು ವಿಚಾರಿಸಿದಾಗ ಸಮರ್ಪಕ ಉತ್ತರ ದೊರಕಿರಲಿಲ್ಲ.
ಕೂಡ್ಲಿಗಿ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ
ಕಂದಾಯ ಇಲಾಖೆ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೈ ಅವರಿಗೆ ಪತ್ರ ಬರೆದಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಕೂಡ್ಲಿಗಿ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ. ಇಲ್ಲಿ ಬಹುಪಾಲು ಜನರು ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರು. ಸಾಮಾಜಿಕವಾಗಿ ದುರ್ಬಲ ವರ್ಗದವರ ಸಂಖ್ಯೆಯೂ ಈ ಭಾಗದಲ್ಲಿ ಹೆಚ್ಚು. ಇಂತಹ ತಾಲೂಕಿನಲ್ಲಿ ಜನರ ಕೆಲಸಗಳನ್ನು ಸಕಾಲದಲ್ಲಿ ನಡೆಸಿಕೊಡಬೇಕು.
ಇಲ್ಲಿಂದಲೇ 20 ಜನರನ್ನು ಬೇರೆಡೆ ನಿಯೋಜನೆಗೊಳಿಸಿರುವುದು ವಿಷಾದನೀಯ, ತಾಲೂಕು ಮತ್ತು ಜಿಲ್ಲೆಯಿಂದ ಹೊರಗೆ ನಿಯೋಜನೆ ಮೇಲೆ ತೆರಳಿರುವ ಅಧಿಕಾರಿಗಳನ್ನು ಕೂಡ್ಲಿಗಿ ತಾಲೂಕಿಗೆ ಮರಳಿ ಕಳುಹಿಸುವಂತೆ ಆದೇಶಿಸಿದ್ದಾರೆ.
ಜನ ಸಾಮಾನ್ಯರ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ
ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ ಸುಮಾರು 20 ಅಧಿಕಾರಿ/ಸಿಬ್ಬಂದಿಗಳು ಕೂಡ್ಲಿಗಿ ತಾಲ್ಲೂಕುನಲ್ಲಿ ಲೀನ್ ಇದ್ದರೂ ಸಹ ನಿಯೋಜನೆ ಮೇರೆಗೆ (ಓಓಡಿ) ತಾಲ್ಲೂಕು ಬಿಟ್ಟು ಇತರೆ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಜನ ಸಾಮಾನ್ಯರ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ ಮತ್ತು ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ, ಸಣ್ಣಪುಟ್ಟ ಕೆಲಸಗಳಿಗೆ ಜನರು ಪದೇ ಪದೇ ತಾಲ್ಲೂಕು ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಪರಿಣಾಮವಾಗಿ ಉಳಿದ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ.
ಆದ್ದರಿಂದ, ಕೂಡ್ಲಿಗಿ ತಾಲ್ಲೂಕಿನಿಂದ ಬೇರೆಡೆಗೆ ನಿಯೋಜನೆ ಮೇರೆಗೆ ತೆರಳಿರುವ ಎಲ್ಲ ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಮೂಲಸ್ಥಾನಕ್ಕೆ ಹಿಂದಿರುಗಿಸಲು ಅವಶ್ಯಕ ಕ್ರಮವಹಿಸುವಂತೆ ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹೊಸದಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲಾ ಕಚೇರಿಗೆ ನಿಯೋಜನೆಗೊಂಡ ಅತೀ ಅವಶ್ಯಕ ಸಿಬ್ಬಂದಿಗೆ ತಾತ್ಕಾಲಿಕ ವಿನಾಯಿತಿ ನೀಡಬಹುದು ಎಂದು ತಿಳಿಸಿದ್ದಾರೆ.