ದೆಹಲಿ ಮೂಲದ 4 ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ
ಬೆಂಗಳೂರು: ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ ಆಧಾರದ ಮೇಲೆ ಕ್ಷೇತ್ರಗಳನ್ನು ಹಂಚಿಕೆ ಮಾಡಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ತೀರ್ಮಾನಿಸಿವೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ 20 ರಿಂದ 25 ಸ್ಥಾನಗಳನ್ನು ಗೆಲ್ಲಲ್ಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಇದಕ್ಕಾಗಿ ಜೆಡಿಎಸ್ ಅನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದರ ಜತೆಗೆ ದೆಹಲಿ ಮೂಲದ 4 ಖಾಸಗಿ ಸಂಸ್ಥೆಗಳ ಮೂಲಕ ಸಮೀಕ್ಷೆ ನಡೆಸಿದೆ.
ಒಂದು ತಾಸಿಗೂ ಹೆಚ್ಚುಕಾಲ ಮಾತುಕತೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕಳೆದ ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಬಿಡದಿ ತೋಟದಲ್ಲಿ ಭೇಟಿಯಾಗಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಒಂದು ತಾಸಿಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.
ಪಂಚರಾಜ್ಯಗಳ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಹೊರಬಿದ್ದ ನಂತರ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ, ಸೀಟು ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ.
ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್, ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಆಧಾರದ ಮೇಲೆ 20 ಸ್ಥಾನಗಳನ್ನು ಗೆಲ್ಲಲ್ಲೇಬೇಕು ಎಂದು ಪಣ ತೊಟ್ಟು ಸಿದ್ಧತೆ ಆರಂಭಿಸಿದೆ.
25 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ
ಕಾಂಗ್ರೆಸ್ ಸಿದ್ಧತೆ ಬಗ್ಗೆಯೂ ಚರ್ಚೆ ನಡೆಸಿದ ಉಭಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬಳಸಿಕೊಂಡು ಈ ಬಾರಿಯೂ ಕನಿಷ್ಠ 25 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು.
ಅದಕ್ಕಾಗಿ ವರ್ಚಸ್ವಿ ನಾಯಕರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ಮಾಡಿದ್ದಾರೆ. ಆದರೆ, ಯಾರನ್ನು ಯಾವ ಕ್ಷೇತ್ರದಿಂದ ಸ್ಪರ್ಧೆಗಿಳಿಸಿದರೆ ಹೇಗೆ? ಎಂಬ ಬಗ್ಗೆಯೂ ವಿಚಾರ ವಿನಿಮಯ ಮಾಡಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವರಿಷ್ಠರ ತೀರ್ಮಾನವಾದರೂ ಇಂಥವರನ್ನು ಕಣಕ್ಕಿಳಿಸಿದರೆ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಮಾಹಿತಿ ರವಾನಿಸಲಿವೆ. ಇದೂ ಕೂಡ ಸಮೀಕ್ಷೆ ಆಧಾರದ ಮೇಲೆ ನಡೆಯಲಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯೋಗೇಶ್ವರ್ ಕಣಕ್ಕೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಇದ್ದರೂ ಆ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಲು ಕುಮಾರಸ್ವಾಮಿ ಒಪ್ಪಿದ್ದಾರೆ.
ಈ ಕ್ಷೇತ್ರದಲ್ಲಿ ಐದು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಜತೆಗೆ ಮೂರು ನಗರ ಪ್ರದೇಶಗಳ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದ್ದು, ಅಲ್ಲಿ ಬಿಜೆಪಿ ಬಲಾಢ್ಯವಾಗಿದೆ.
ಹಾಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರನ್ನು ಈ ಬಾರಿ ಸೋಲಿಸುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಈ ಕ್ಷೇತ್ರ ಬಿಜೆಪಿ ಬಿಟ್ಟುಕೊಡಲಿದ್ದು, ಅಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ.
ಯಡಿಯೂರಪ್ಪ ಕುಟುಂಬಕ್ಕೂ ಯೋಗೇಶ್ವರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಕುಮಾರಸ್ವಾಮಿ ಕ್ಷೇತ್ರದ ಗೆಲುವಿನ ದೃಷ್ಟಿಯಿಂದ ಟಿಕೆಟ್ ಅವರಿಗೆ ನೀಡುವಂತೆ ಸಲಹೆ ಮಾಡಿದ್ದಾರೆ.
4 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ
ರಾಜ್ಯದ 28 ಕ್ಷೇತ್ರಗಳ ಪೈಕಿ ಕೇವಲ 4 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದ್ದು, ಉಳಿದ ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಲಿದೆ.
ಹಾಸನ, ಮಂಡ್ಯ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಣಕ್ಕಿಳಿಯಲು ಜೆಡಿಎಸ್ ನಿರ್ಧರಿಸಿದ್ದರೂ ಸಮೀಕ್ಷಾ ವರದಿ ಬಳಿಕವಷ್ಠೆ ಕ್ಷೇತ್ರ ಹಂಚಿಕೆ ಅಂತಿಮಗೊಳ್ಳಲಿದೆ.
ಲೋಕಸಭಾ ಚುನಾವಣೆಯ ಜತೆಗೆ ಸರ್ಕಾರದ ವಿರುದ್ಧ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಜಂಟಿಯಾಗಿ ಹೋರಾಟ ನಡೆಸುವುದು ಮತ್ತು ಕೆಲವು ಹಗರಣಗಳನ್ನು ಬಯಲಿಗೆಳೆಯಲು ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಕಾರ್ಯತಂತ್ರ ರೂಪಿಸಿದ್ದಾರೆ.