ನ.30ರಂದು ಕೊನೆ ಅವಕಾಶ: ಕೆಇಎ
ಬೆಂಗಳೂರು: ಬಾಕಿ ಉಳಿದಿರುವ ಯುಜಿ ಆಯುಷ್ ಸೀಟುಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೊನೆ ಅವಕಾಶ ನೀಡಿದ್ದು, ಅರ್ಹರು ನ.30ರಂದು ನಿಗದಿತ ಶುಲ್ಕದ ಡಿ.ಡಿ ಸಮೇತ ಕೆಇಎ ಕಚೇರಿಗೆ ಬಂದು ಪ್ರವೇಶ ಪಡೆಯಬಹದು.
ವಿಸ್ತರಿತ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ನಂತರ ಉಳಿದಿರುವ ಸೀಟುಗಳ ಸಂಖ್ಯೆಯನ್ನು ಕೆಇಎ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಅರ್ಹರಿಗೆ ಈ ಸೀಟುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಜಿನೀಟ್ ಅರ್ಹತೆಯ ಅಂಕಗಳನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಹಾಗೂ ಇಲ್ಲಿಯವರೆಗೂ ನೋಂದಣಿ ಮಾಡದಿರುವ ಅರ್ಹ ಅಭ್ಯರ್ಥಿಗಳು ಸಹ ಸದರಿ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ಇದ್ದಲ್ಲಿ ಅಂತಹವರು ಕೂಡ ಭಾಗವಹಿಸಬಹುದು. ಅಭ್ಯರ್ಥಿಗಳಿಗೆ ನೋಂದಣಿ ಮತ್ತು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೆಇಎ ಪೋರ್ಟಲ್ ನಲ್ಲಿ ನ.30ರ ಬೆಳಿಗ್ಗೆ 10ರಿಂದ 11ರವರೆಗೆ ಅವಕಾಶ ಇರುತ್ತದೆ.
ಹೊಸದಾಗಿ ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಅಂದು ಬೆಳಿಗ್ಗೆ 11ರಿಂದ 11.30ರವೆಗೆ ನಡೆಯಲಿದೆ. ನಂತರ ಡಿ.ಡಿ ಸಲ್ಲಿಸಿದ ಅರ್ಹರಿಗೆ ಮಧ್ಯಾಹ್ನ 2 ಗಂಟೆವರೆಗೆ ಆಪ್ಷನ್ ಎಂಟ್ರಿಗೆ ಅವಕಾಶ ನೀಡಲಾಗುತ್ತದೆ. ಸಂಜೆ 4 ಗಂಟೆಗೆ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ರಮ್ಯಾ ತಿಳಿಸಿದ್ದಾರೆ.
ಪಿಜಿ ನೀಟ್ ಡಿಡಿ ಸಲ್ಲಿಸಲು ಮತ್ತೊಂದು ದಿನ ಅವಕಾಶ
ಪಿಜಿ ವೈದ್ಯಕೀಯ/ದಂತ ವೈದ್ಯಕೀಯ ಸೀಟುಗಳ ಭರ್ತಿಗೆ ನಡೆಸುವ ವಿಶೇಷ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅರ್ಹರಿಗೆ ಡಿ.ಡಿ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು ಅದನ್ನು ಅಭ್ಯರ್ಥಿಗಳ ಮನವಿ ಮೇರೆಗೆ ನ.30ರ ಬೆಳಿಗ್ಗೆ 11ಗಂಟೆವರೆಗೆ ವಿಸ್ತರಿಸಲಾಗಿದೆ.
ಇದಾದ ನಂತರ ಮಧ್ಯಾಹ್ನ 12ರವರೆಗೆ ಆಪ್ಷನ್ ಎಂಟ್ರಿ ಮಾಡಬಹುದು. 3ಗಂಟೆಗೆ ಫಲಿತಾಂಶ ಪ್ರಕಟ. ನಂತರ ಮೂಲ ದಾಖಲೆ ಸಲ್ಲಿಸಲು 4 ಗಂಟೆವರೆಗೆ ಅವಕಾಶ ಇರುತ್ತದೆ ಎಂದು ರಮ್ಯಾ ತಿಳಿಸಿದ್ದಾರೆ.