ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಬೆಂಗಳೂರು: ಭ್ರೂಣ ಹತ್ಯೆಯ ಜಾಲವನ್ನು ಬುಡಸಮೇತ ಕಿತ್ತುಹಾಕಬೇಕಿದೆ. ಮಂಡ್ಯದ ಆಲೆಮನೆ ಹಾಗೂ ಮೈಸೂರಿನ ಮಾತಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.
ಈ ನಿಟ್ಟಿನಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮಂಡ್ಯದ ಆಲೆಮನೆ ಸ್ಥಳಕ್ಕೆ ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಕ್ಯಾನಿಂಗ್ ಸೆಂಟರ್ ಗಳಿಗೂ ಕೂಡ ಭೇಟಿ ನೀಡಿದ್ದು, ಇವುಗಳ ಮೇಲೆ ಹೆಚ್ಚು ನಿಗಾ ಇಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಸೂರಿನ ಮಾತಾ ಆಸ್ಪತ್ರೆಯ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಅಲ್ಲಿಯ ಸ್ಥಳೀಯರೊಂದಿಗೆ ಆಸ್ಪತ್ರೆ ನಡೆಸುತ್ತಿದ್ದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿ ಕಂಡುಬಂದಿದ್ದು, ಅಧಿಕಾರಿಗಳು ತಪ್ಪು ಮಾಹಿತಿ ನೀಡಿರವುದನ್ನುಸಚಿವರು ಗಮನಿಸಿದರು.
ಭ್ರೂಣ ಹತ್ಯೆ ಪ್ರಕರಣ ಕುರಿತು ಚರ್ಚೆ
ಭೇಟಿ ಬಳಿಕ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ, ಹಿರಿಯ ಪೊಲೀಸ್ ಅಧಿಕಾರಿಗಳು, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಭ್ರೂಣ ಹತ್ಯೆ ಪ್ರಕರಣ ಕುರಿತು ಚರ್ಚೆ ನಡೆಸಿದರು.
ಸಭೆ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭ್ರೂಣ ಹತ್ಯೆ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವ ಕುರಿತು ಚರ್ಚಿಸಿದರು.
ಡಿಎಚ್ ಓ ಡಾ. ರವಿ ವೈದ್ಯಾಧಿಕಾರಿ ರಾಜೇಶ್ವರಿ ಅಮಾನತ್ತು
ಸಭೆ ಬಳಿಕ ಮೈಸೂರು ಹಿಂದಿನ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ. ರವಿ ಹಾಗೂ ಮೈಸೂರು ತಾಲೂಕು ವೈದ್ಯಾಧಿಕಾರಿ ರಾಜೇಶ್ವರಿ ಅವರನ್ನ ತಕ್ಷಣ ಅಮಾನತ್ತು ಮಾಡುವಂತೆ ಆರೋಗ್ಯ ಇಲಾಖೆ ಆಯುಕ್ತರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಥಳದಲ್ಲೇ ಸೂಚಿಸಿದ್ದಾರೆ.
ಅಲ್ಲದೇ ಪ್ರಕರಣದಲ್ಲಿ ಯಾರೇ ಅಧಿಕಾರಿಗಳ ಕೈವಾಡ ಕಂಡುಬಂದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣವನ್ನ ‘ಸಿಐಡಿ’ ತನಿಖೆಗೆ ವಹಿಸಲಾಗಿದ್ದು, ಭ್ರೂಣ ಹತ್ಯೆ ಪ್ರಕರಣದ ತನಿಖೆಗೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ.
ಕಾನೂನು ಇನ್ನಷ್ಟು ಬಿಗಿಗೊಳಿಸುತ್ತೇವೆ
ಭ್ರೂಣ ಹತ್ಯೆ ಒಂದು ಸಾಮಾಜಿ ಪಿಡುಗು. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ಎಷ್ಟು ಮಟ್ಟ ಹಾಕಲು ಸಾಧ್ಯ. ಆರೋಗ್ಯ ಇಲಾಖೆ, ಸರ್ಕಾರ ಸಂಪೂರ್ಣವಾಗಿ ಪ್ರಮಾಣಿಕ ಪ್ರಯತ್ನ ನಡೆಸಲಿದೆ. ಈಗಿರುವ ಕಾನೂನು ಗಳನ್ನ ಇನ್ನಷ್ಟು ಬಿಗಿಗೊಳಿಸುತ್ತೇವೆ.
ಆದರೆ ನಮ್ಮ ಸಮಾಜ ಕೂಡ ಬದಲಾಗಬೇಕು. ಹೆಣ್ಣು ಎಂಬ ಒಂದೇ ಕಾರಣಕ್ಕೆ ಭ್ರೂಣ ಹತ್ಯೆ ಮಾಡಿಸುವುದು ಸರಿಯಲ್ಲ. ಭ್ರೂಣ ಹತ್ಯೆ ಮಾಡಿಸುವವರ ವಿರುದ್ಧವು ಕ್ರಮಗಳಾಗಬೇಕು. ನಮ್ಮ ಸಮಾಜ ಕೂಡ ಜಾಗೃತರಾಗಿ ಭ್ರೂಣ ಹತ್ಯೆ ಪಿಡುಗನ್ನು ತೊಡಗಿಸಲು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು.