ಬೆದರಿಕೆ ಹಾಕಿದವರ ಪತ್ತೆಗೆ ಪೊಲೀಸರ ಕಾರ್ಯಚರಣೆ: ಡಿಸಿಎಂ
ಬೆಂಗಳೂರು:ರಾಜಧಾನಿಯ 15 ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಹುಸಿ ಕರೆಯಾಗಿದ್ದು, ಪೋಷಕರು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹುಸಿ ಬಾಂಬ್ ಕರೆ ಬಂದಿದ್ದ ನೀವ್ ಅಕಾಡೆಮಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಸಿ ಬೆದರಿಕೆ ಹಾಕಿದವರನ್ನು 24 ಗಂಟೆಯೊಳಗೆ ಪತ್ತೆ ಮಾಡಲಾಗುವುದು, ಪೊಲೀಸರು ಈಗಾಗಲೆ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದರು.
ಒಂದು ವರ್ಷದ ಹಿಂದೆಯೂ ಇದೇ ರೀತಿ ಹುಸಿ ಬಾಂಬ್ ಬೆದರಿಕೆ ಬಂದಿತ್ತು, ಪೋಲಿಸ್ ಆಯುಕ್ತರು ಈಗಾಗಲೆ ಸುದ್ದಿಗೋಷ್ಠಿ ನಡೆಸಿ ಇದು ಹುಸಿ ಬಾಂಬ್ ಬೆದರಿಕೆ ಎಂದು ಮಾಹಿತಿ ನೀಡಿದ್ದಾರೆ, ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಧೈರ್ಯದಿಂದ ಇರಬೇಕು ಎಂದರು.
ಬೆಂಗಳೂರು ಜನತೆಗೆ ಯಾವುದೇ ಆತಂಕ ಬೇಡ
ಬಾಂಬ್ ನಿಷ್ಕ್ರಿಯದಳ ಸ್ಥಳ ಪರಿಶೀಲನೆ ನಡೆಸಿದೆ, ಬೆಂಗಳೂರು ಜನತೆಗೆ ಯಾವುದೇ ಆತಂಕ ಬೇಡ, ಕೆಲವು ದುಷ್ಕರ್ಮಿಗಳಿಂದ ಬೆದರಿಕೆ ಕರೆ ಬಂದಿದ್ದು, 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ.
ಕೆಲವರು ಕಿಡಿಗೇಡಿಗಳು ಈ ರೀತಿ ಚೇಷ್ಟೆ ಮಾಡುತ್ತಾರೆ, ಬೆಂಗಳೂರು ಹಬ್ಬ ಅದರ ಪಾಡಿಗೆ ಅದು ನಡೆಯುತ್ತದೆ ಎಂದರು.
ಕೆಲವೊಮ್ಮೆ 10 ಹುಸಿ ಕರೆಗಳ ಪೈಕಿ ಒಂದು ಟಾರ್ಗೆಟ್ ಮಾಡುವ ಸಾಧ್ಯತೆ ಇರುತ್ತದೆ, ಇಂತಹ ಹುಸಿ ಕರೆಗಳನ್ನು ನಿರ್ಲಕ್ಷಿಸುವುದಿಲ್ಲ, ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದರು.