ಅರಣ್ಯ ಸಿಬ್ಬಂದಿಗೆ ಸೂಕ್ತ ತರಬೇತಿಗೆ ಕ್ರಮ
ಬೆಂಗಳೂರು: ನೀರು, ಮೇವನ್ನು ಅರಣ್ಯದಲ್ಲೇ ಸಮರ್ಪಕವಾಗಿ ಒದಗಿಸುವ ಮೂಲಕ ಆನೆಗಳು ನಾಡಿಗೆ ವಲಸೆ ಬರುವುದನ್ನು ತಡೆಯುವಂತೆ ಸಹೋದ್ಯೋಗಿಗಳೇ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಕಿವಿಮಾತು ಹೇಳಿದ್ದಾರೆ.
ದಸರಾ ಅಂಬಾರಿ ಹೊರುವ ಅರ್ಜುನ ಆನೆ ಕಾಳಗದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವರು ಕರೆದಿದ್ದ, ಕೊಡಗು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ಇಂತಹ ಸಲಹೆ-ಸೂಚನೆಗಳು ಬಂದಿವೆ.
ಅರಣ್ಯದಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಇದ್ದರೂ, ಅದು ಸಾಲದಾಗಿದೆ, ಮತ್ತಷ್ಟು ಮೇವು ಹಾಗೂ ನೀರು ಸಂಗ್ರಹಕ್ಕೆ ಹೆಚ್ಚು ಒತ್ತು ಕೊಡಿ.
ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಿ
ಜೊತೆಗೆ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ತಡೆಗೋಡೆಯಾಗಿ ನಿರ್ಮಿಸಿ ವಲಸೆ ತಪ್ಪಿಸಿ. ಅರಣ್ಯ ಗಡಿಯಲ್ಲಿ ವಿದ್ಯುತ್ ತಂತಿ ಅಳವಡಿಕೆ ಮತ್ತು ಕಂದಕ ತೋಡುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ.
ನಮಗಿಂತ ಕಾಡುಪ್ರಾಣಿಗಳು ಬುದ್ಧಿವಂತವಾಗಿದ್ದು, ಅವುಗಳು ಇವನ್ನು ನುಸುಳಿ ಬರುತ್ತಿವೆ. ಇಲಾಖೆ ಸುರಕ್ಷಾ ಕ್ರಮ ಕೈಗೊಳ್ಳಲು ನಮ್ಮ ಎಲ್ಲಾ ಸಹಕಾರ ಇದೆ ಎಂದರು.
ವನ್ಯ ಮೃಗಗಳು ಮತ್ತು ಮಾನವರ ನಡುವಿನ ಸಂಘರ್ಷದಲ್ಲಿ ಉಂಟಾಗುತ್ತಿರುವ ಸಾವನ್ನು ತಪ್ಪಿಸುವಲ್ಲಿ ಅರಣ್ಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮಕೈಗೊಳ್ಳಬೇಕು.
ನೋಡಲ್ ಅಧಿಕಾರಿಗಳಿಗೆ ಸೂಚನೆ
ನೋಡಲ್ ಅಧಿಕಾರಿಗಳಿಗೆ ವಾರದಲ್ಲಿ ಕನಿಷ್ಠ 2 ದಿನ ನಿಯೋಜಿತ ಜಿಲ್ಲೆಯಲ್ಲೇ ಉಳಿದು ಪರಿಸ್ಥಿತಿ ನಿಭಾಯಿಸಲು ಸೂಚಿಸಲಾಗಿದೆ.
ಆನೆಗಳ ಸಮಸ್ಯೆ ಇರುವ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ.
ಮಾನವ-ವನ್ಯಜೀವಿ ಸಂಘರ್ಷದಲ್ಲಿ 43 ಜನರ ಸಾವು
ಕಳೆದ ಏಪ್ರಿಲ್‌ನಿಂದೀಚೆಗೆ ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಒಟ್ಟು 43 ಜನರು ಸಾವಿಗೀಡಾಗಿದ್ದು, ಈ ಪೈಕಿ 30 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಚಾಮರಾಜನಗರದಲ್ಲಿ 10, ಕೊಡಗು ಜಿಲ್ಲೆಯಲ್ಲಿ 7, ರಾಮನಗರ 3, ಬೆಂಗಳೂರು ಮತ್ತು ಮೈಸೂರು, ಹಾಸನ ವೃತ್ತದಲ್ಲಿ ತಲಾ 2, ಶಿವಮೊಗ್ಗದಲ್ಲಿ ಒಬ್ಬರು ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.