ಶಾಸಕರಿಂದ ಹಾಸ್ಟೆಲ್ ಗೆಹೆಚ್ಚಿದ ಒತ್ತಡ: ತಂಗಡಗಿ
ಬೆಳಗಾವಿ: ರಾಜ್ಯದ ಎಲ್ಲಾ ಶಾಸಕರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಒತ್ತಡ ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರದಿಂದ 100 ಹೊಸ ಹಿಂದುಳಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.
ಬುಧವಾರದ ವಿಧಾನಸಭಾ ಪ್ರಶ್ನೋತರ ಕಲಾಪದ ವೇಳೆ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಳಹಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಸಿಗದೆ ಹಾಗೆ ಉಳಿಯುತ್ತಾರೆ. ಹಾಗಾಗಿ ಈ ಬಾರಿ ವಿದ್ಯಾರ್ಥಿ ನಿಲಯಗಳ ಸಂಖ್ಯಾ ಬಲದ ಶೇ.25 ರಷ್ಟು ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.
38 ಕೋಟಿ ರೂ. ವಿದ್ಯಾಸಿರಿಯಡಿ ನೀಡಲಾಗಿದೆ
ಪ್ರವೇಶ ಸಿಗದ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾಸಿರಿ ಯೋಜನೆಯನ್ನು ಜಾರಿ ಮಾಡಿದೆ. ಪ್ರಸಕ್ತ ವರ್ಷದಲ್ಲಿ 38 ಕೋಟಿ ರೂ.ಗಳನ್ನು ವಿದ್ಯಾಸಿರಿಯಡಿ ನೀಡಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ 18 ಮೆಟ್ರಿಕ್ ಪೂರ್ವ, 25 ಮೆಟ್ರಿಕ್ ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 4684 ವಿದ್ಯಾರ್ಥಿಗಳಿಗೆ ಪ್ರವೇಕಾಶ ಕಲ್ಪಿಸಲಾಗಿದೆ.
ಜುಲೈ ತಿಂಗಳಿನಲ್ಲಿ ಉಡುಪಿ ತಾಲ್ಲೂಕಿನ ಶಿವಳ್ಳಿ ಗ್ರಾಮದಲ್ಲಿ 125 ಸಂಖ್ಯಾಬಲದ ಮೆಟ್ರಿಕ್ ನಂತರ ಬಾಲಕಿರ ವಿದ್ಯಾರ್ಥಿನಿಲಯ ಮಂಜೂರು ಮಾಡಲಾಗಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸಚಿವ ಶಿವರಾಜ್ ಎಸ್ ತಂಗಡಗಿ ಉತ್ತರಿಸಿದರು.
ಶಾಸಕ ಹರೀಶ್.ಬಿ.ಪಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವರಾಜ್ ಎಸ್ ತಂಗಡಗಿ, ಹಿಂದುಳಿದ ವರ್ಗಗಳ ಇಲಾಖೆಯಿಂದ ಒಟ್ಟು 9 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ.
ಇದರಲ್ಲಿ 8 ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡ ಹೊಂದಿವೆ. ಉಳಿದ ಒಂದು ವಿದ್ಯಾರ್ಥಿ ನಿಲಯಕ್ಕೂ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಸದ್ಯ ಈ ವಿದ್ಯಾರ್ಥಿ ನಿಲಯಗಳಲ್ಲಿ ಒಟ್ಟು 745 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ ಎಂದರು.
ಸರ್ಕಾರ ಮುಂದಿನ 30 ವರ್ಷಗಳ ಆಲೋಚನೆ ಇಟ್ಟುಕೊಂಡು ವಿದ್ಯಾರ್ಥಿ ನಿಲಯಗಳ ಯೋಜನೆ ರೂಪಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದ ಹಾಗೆ, ಶಾಲಾ ಕಾಲೇಜು ಆರಂಭವಾಗುವ ವೇಳೆ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಸಚಿವರಿಗೆ ಸೂಚಸಿದರು.
ಮುಂದಿನ ವರ್ಷ ನಿಗಮಗಳಿಗೆ ಅನುದಾನ
ಶಾಸಕ ಧೀರಜ್ ಮುನಿರಾಜು, ಪುಟ್ಟರಂಗಶೆಟ್ಟಿ, ಎಂ.ಚಂದ್ರಪ್ಪ ಮಾತನಾಡಿ ನಿಗಮ ಮಂಡಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದರು.
ಕಳೆದ ಸರ್ಕಾರದ ಅವಧಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ 10 ಹೊಸ ನಿಗಮಗಳನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ಆದರೆ ಈ ನಿಗಮಗಳಿಗೆ ಅನುದಾನವನ್ನು ನೀಡಿರಲಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದೆನೆ. ಮುಂದಿನ ವರ್ಷದಲ್ಲಿ ಈ ನಿಗಮಗಳಿಗೆ ಅನುದಾನ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.