150 ಕೋಟಿ ರೂ. ಅನುದಾನ: ರಾಮಲಿಂಗಾರೆಡ್ಡಿ
ಬೆಳಗಾವಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2024ರ ಮಾರ್ಚ್ ಅಂತ್ಯಕ್ಕೆ 921 ಎಲೆಕ್ಟ್ರಿಕಲ್ ಬಸ್ ನೀಡಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಚ್.ಎಸ್. ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಇದುವರೆಗೆ ಸ್ಮಾರ್ಟ್ಸಿಟಿ ಯೋಜನೆಯಡಿ ಒಟ್ಟು 90 ಎಲೆಕ್ಟ್ರಿಕಲ್ ಬಸ್‌ಗಳನ್ನು ಜಿಸಿಸಿ ಆಧಾರದ ಮೇಲೆ ಪಡೆದುಕೊಂಡಿದೆ.
ಬಿಎಂಸಿಟಿಸಿಯಿಂದ ಪ್ರಸ್ತುತ ಈಗ ಒಟ್ಟು 15 ಬಸ್ ಘಟಕ/ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಸೌಲಭ್ಯಗಳನ್ನು ಸ್ಥಾಪಿಸಿ 390 ಎಲೆಕ್ಟ್ರಿಕಲ್ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರವು ಬಿಎಂಟಿಸಿಗೆ 150 ಕೋಟಿ ರೂ.ಗಳ ಅನುದಾನ ನೀಡಿದೆ ಎಂದು ಸಚಿವರು ತಿಳಿಸಿದರು.
ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಳ
ಕೆ.ಎಸ್.ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಕ್ತಿ ಯೋಜನೆಯು ಜಾರಿಯಾದ ನಂತರ ರಾಜ್ಯದ ರಸ್ತೆ ಸಾರಿಗೆ ನಿಗಮಗಳಲ್ಲಿ ಆದಾಯ ಹೆಚ್ಚಳವಾಗಿದೆ. ಶಕ್ತಿ ಯೋಜನೆ ಜಾರಿಯ ನಂತರ ಪ್ರತಿದಿನದ ಸರಾಸರಿಯ ಆದಾಯವು 2023-24ನೇ ಸಾಲಿನಲ್ಲಿ ಕ.ರಾ.ರ.ಸಾರಿಗೆ ನಿಗಮದಲ್ಲಿ 12.57 ಕೋಟಿ ರೂ., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 5.39 ಕೋಟಿ ರೂ., ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 6.60 ಕೋಟಿ ರೂ. ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 5.92 ಕೋಟಿ ರೂ.ನಷ್ಟು ಆಗಿರುತ್ತದೆ ಎಂದು ತಿಳಿಸಿದರು.
5,500 ಹೊಸ ಬಸ್‌ಗಳ ಖರೀದಿಗೆ ಅನುಮತಿ
ಶಕ್ತಿ ಯೋಜನೆ ಜಾರಿಯ ನಂತರ 108 ಕೋಟಿಗೂ ಆಧಿಕ ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದು, ಪ್ರತಿದಿನ 1.5 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಮತ್ತೀಗ ಹೊಸದಾಗಿ 5,500 ಹೊಸ ಬಸ್‌ಗಳ ಖರೀದಿಗೆ ಅನುಮತಿ ನೀಡಿದ್ದು, 9000 ಸಿಬ್ಬಂದಿಯ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.