ರಾಜ್ಯದ ಹಣಕಾಸಿನ ಮೇಲೆ ವಿಪರೀತ ಒತ್ತಡ
ಬೆಳಗಾವಿ:ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ 40 ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಕಡಿತವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ಬರುವ ಒಟ್ಟು ತೆರಿಗೆಯ ರಾಜ್ಯದ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬರಬೇಕಿದ್ದ ಈ ಪ್ರಮಾಣದ ಹಣ ಕಡಿತವಾಗಿರುವುದರಿಂದ ರಾಜ್ಯದ ಹಣಕಾಸಿನ ಮೇಲೆ ವಿಪರೀತ ಒತ್ತಡ ಹೆಚ್ಚಿದೆ ಎಂದಿದ್ದಾರೆ.
ನಮ್ಮ ಸಂಪನ್ಮೂಲದ ಮೇಲೆಯೇ ಅವಲಂಬಿಸಬೇಕಾಗಿದೆ
ಕೇಂದ್ರ ಸರ್ಕಾರದ ಈ ನಿಲುವಿನಿಂದಾಗಿ ನಾವು ನಮ್ಮ ಸಂಪನ್ಮೂಲದ ಮೇಲೆಯೇ ಅವಲಂಬಿಸಬೇಕಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದರು.
2018-19ನೇ ಸಾಲಿನಿಂದ 2022-23ರ ಸಾಲಿನವರೆಗಿನ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗಾಗಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಬಿಡುಗಡೆಯಾದ ಅನುದಾನ ಎಷ್ಟು ಈ ಅನುದಾನದಲ್ಲಿ ಖರ್ಚಾದ ಹಣ ಎಷ್ಟು ಎಂದು ಯು.ಬಿ.ವೆಂಕಟೇಶ್ ಅವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದರು.
ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ
ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ನಮ್ಮ ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ತೆರಿಗೆ ಪಾಲು ಹೆಚ್ಚಳವಾಗಿದೆ ಎಂದು ವಿವರಿಸಿದರು.