ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಧಾರ
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ನಾಣು ಹಾಗೂ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರನ್ನು ಜೆಡಿಎಸ್‌ನಿಂದ ಇಂದು ಉಚ್ಛಾಟಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಉಚ್ಛಾಟಿಸುವ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಪಕ್ಷವನ್ನು ತೆಕ್ಕೆಗೆ ತೆಗೆದುಕೊಳ್ಳಲು ವಿರೋಧಿಗಳ ಯತ್ನ
ಎನ್‌ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಿರುವುದನ್ನು ವಿರೋಧಿಸಿ ಕೇರಳ ಘಟಕದ ಒಂದು ತಂಡ, ಉಪಾಧ್ಯಕ್ಷ ನಾಣು, ಇಬ್ರಾಹಿಂ ಸೇರಿದಂತೆ ಕೆಲವು ಮುಖಂಡರು ಪ್ರತ್ಯೇಕ ಸಭೆ ನಡೆಸಿ ರಾಷ್ಟ್ರೀಯ ಅಧ್ಯಕ್ಷರನ್ನೇ ಉಚ್ಛಾಟಿಸಿ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದರು.
ಈ ಗುಂಪಿಗೆ ಕಾಂಗ್ರೆಸ್ ಪರೋಕ್ಷ ಬೆಂಬಲ ನೀಡುತ್ತಿದೆ ಎಂಬ ಮಾಹಿತಿ ಅರಿಯುತ್ತಿದ್ದಂತೆ ಗೌಡರು ತುರ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಉಚ್ಛಾಟಿಸಿದರು.
ನಾಣು ಮತ್ತು ಇಬ್ರಾಹಿಂ ಪಕ್ಷವನ್ನು ವಿಭಜಿಸಿ ಕಾಂಗ್ರೆಸ್ ಜೊತೆ ಕೈಜೋಡಿಸಲು ಮಂದಾಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ತುರ್ತು ಕಾರ್ಯಕಾರಿಣಿ ನಡೆಸಿದ ಗೌಡರು ಸಭೆಯಲ್ಲೇ ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಸಭೆ ನಿರ್ಣಯದ ಹಿಂದೆಯೇ ಉಚ್ಚಾಟನೆ ಆದೇಶ
ಸಭೆ ನಿರ್ಣಯ ಮಾಡುತ್ತಿದ್ದಂತೆ ರಾಷ್ಟ್ರೀಯ ಅಧ್ಯಕ್ಷರು ಆದೇಶ ಕೂಡ ಹೊರಡಿಸಿದ್ದಾರೆ.
ಇಬ್ರಾಹಿಂ ಅವರನ್ನು ಕಳೆದ ಕೆಲವು ದಿನಗಳ ಹಿಂದಷ್ಟೇ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಅಮಾನತು ಮಾಡಿದ್ದರು, ಇದೀಗ ಉಚ್ಛಾಟನೆ ಮಾಡಿದ್ದಾರೆ.
ಇಂದಿನ ಸಭೆಯಲ್ಲಿ ಪಕ್ಷ ವಿರೋಧಿಗಳ ವಿರುದ್ಧ ಕ್ರಮಕೈಗೊಳ್ಳುವ ಜೊತೆಗೆ ಎನ್‌ಡಿಎ ಮೈತ್ರಿ ಕೂಟ ಸೇರಿದ ನಂತರದಲ್ಲಿ ಪಕ್ಷದ ನಿಲುವುಗಳು, ಮುಂಬರುವ ಲೋಕಸಭಾ ಚುನಾವಣೆಯನ್ನು ಮೈತ್ರಿಕೂಟದೊಂದಿಗೆ ಎದುರಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಸುವ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ರಾಷ್ಟ್ರೀಯ ಘಟಕ ಪುನರ್ ರಚನೆ
ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಉಚ್ಛಾಟನೆ ಮಾಹಿತಿ ನೀಡಿದ ದೇವೇಗೌಡರು, ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಇನ್ನು ಒಂದು ವರ್ಷದೊಳಗೆ ಪಕ್ಷದ ರಾಷ್ಟ್ರೀಯ ಘಟಕವನ್ನು ಪುನರ್ ರಚಿಸಲಾಗುವುದು.
ಸಾಂಸ್ಥಿಕ ಚುನಾವಣೆಗೂ ಮುನ್ನ ರಾಷ್ಟ್ರಾದ್ಯಂತ ಸದಸ್ಯತ್ವ ನೋಂದಣಿ ಮಾಡಲಾಗುವುದು, ರಾಷ್ಟ್ರಾಧ್ಯಕ್ಷರು ಬದುಕಿರುವಾಗಲೇ ಉಪಾಧ್ಯಕ್ಷ ನಾಣು ಪರ್ಯಾಯ ಸಭೆ ನಡೆಸಲು ಮುಂದಾಗಿದ್ದರು ಇವರಿಗೆ ಈ ಅಧಿಕಾರ ಕೊಟ್ಟವರು ಯಾರು, ಇವರಿಗೆ ಯಾವ ನಿಯಮದಡಿ ಅವಕಾಶ ಇದೆ ಎಂಬ ಆಧಾರದ ಮೇಲೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರು.