ಕೇಂದ್ರ ಬಿಜೆಪಿ ನಾಯಕರ ಜತೆ ಪ್ರಭಾವೀ ಸಚಿವರಿಂದ ಚೌಕಾಸಿ
ಹಾಸನ: ತಮ್ಮ ಅಕ್ರಮಗಳಿಂದ ಪಾರಾಗಲು ಬಿಜೆಪಿ ಕೇಂದ್ರ ನಾಯಕರ ಜತೆ ಚೌಕಾಸಿ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ಪ್ರಭಾವೀ ಮಂತ್ರಿಯೊಬ್ಬರು ಐವತ್ತು-ಅರವತ್ತು ಶಾಸಕರನ್ನು ಕರೆದುಕೊಂಡು ಹೋಗಲು ಸಿದ್ಧವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಣವಿನಕೆರೆ ಸ್ವಾಮೀಜಿಗಳು ಡಿಕೆ ಶೀವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಬಿ.ಕೆ. ಹರಿಪ್ರಸಾದ್ ಸೇರಿ ಅನೇಕರು ಬಂಡೆದ್ದಿದ್ದಾರಲ್ಲ ಎನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಕಾಂಗ್ರೆಸ್ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ. ಈ ಸರಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ. ಪ್ರಭಾವೀ ಮಂತ್ರಿಯೊಬ್ಬರು ತಮ್ಮ ಮೇಲಿರುವ ಅಕ್ರಮಗಳಿಂದ ಪಾರಾಗಲು ಹರಸಾಹಸ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ನಾಯಕರ ಕೈಕಾಲು ಕಟ್ಟುತ್ತಿದ್ದಾರೆ. ಸುಮಾರು ಐವತ್ತು-ಅರವತ್ತು ಶಾಸಕರನ್ನು ಕರೆದುಕೊಂಡು ಬೇಲಿ ಹಾರಲು ತಯಾರಿ ನಡೆಸುತ್ತಿದ್ದಾರೆ ಎಂದು ಯಾರೋ ಮೊನ್ನೆ ನನಗೆ ಮಾಹಿತಿ ನೀಡಿದರು ಎಂದರು.
ಇಷ್ಟಕ್ಕೂ ಅವರು ಯಾರು? ಎಂದು ಮಾಧ್ಯಮ ಪ್ರತಿನಿಧಿಗಳು ಪದೇಪದೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು, ಸಣ್ಣಪುಟ್ಟವರು ಹೋಗಲು ಆಗುತ್ತದೆಯೇ? ದೊಡ್ಡವರು, ಅದರಲ್ಲೂ ಪ್ರಭಾವೀಗಳೇ ಈ ಸಾಹಸ ಮಾಡಲು ಸಾಧ್ಯ? ಅಯ್ಯೋ ದಯವಿಟ್ಟು ನಿಮ್ಮ ಜೊತೆ ಬಂದುಬಿಡ್ತಿನಿ. ಅಲ್ಲಿಯವರೆಗೂ ಐದಾರು ತಿಂಗಳು ರಿಲೀಫ್ ಕೊಡಿ ಅಂತ ಬೇಡಿಕೊಂಡು ಹೋಗಿದ್ದು ಗೊತ್ತು ಎಂದು ಉತ್ತರಿಸಿದರು.
ಮಹಾರಾಷ್ಟ್ರದಲ್ಲಿ ನಡೆದಂತೆ ಕರ್ನಾಟಕದಲ್ಲಿ ಯಾರು ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣದಲ್ಲಿ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಮಾಣಿಕತೆ, ನಿಷ್ಠೆ ಅನ್ನುವುದು ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನೇನು ಆಗಬೇಕು ಮಾಡಿಕೊಂಡು ಹೋಗುತ್ತಿದ್ದಾರೆ ಅಷ್ಟೇ. ಇವತ್ತು ಇಲ್ಲಿ ಇರುತ್ತಾರೆ, ಅನುಕೂಲ ಆಗಬೇಕಾದರೆ ಇನ್ನೊಂದು ಕಡೆ ಹೋಗುತ್ತಾರೆ. ಇದು ಇವತ್ತಿನ ರಾಜಕಾರಣ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ವಿರುದ್ದ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರೀ ಹರಿಪ್ರಸಾದ್ ಅಲ್ಲ. ಇನ್ನೂ ಸಾಕಷ್ಟು ಜನ ಇದ್ದಾರೆ. ಒಂದೊಂದೇ ಧ್ವನಿ ಹೊರ ಬರುತ್ತದೆ ಎಂದರು. ಪಾಪ. ಹರಿಪ್ರಸಾದ್ ಅವರ ಹೆಸರನ್ನಷ್ಟೇ ಏಕೆ ಹೇಳುತ್ತೀರಿ? ಅಧಿಕಾರದಲ್ಲಿ ಉಳಿದುಕೊಳ್ಳಲು ವ್ಯಾಪಾರ ಮಾಡಲು ಹೋಗಿದ್ದಾರೆ. ಮಾಡಿರುವ ಅಕ್ರಮಗಳನ್ನು ಸರಿಪಡಿಸಿಕೊಳ್ಳಲು ಹೋಗಿರುವ ಮಾಹಿತಿಯೂ ಇದೆ ನನಗೆ. ಹರಿಪ್ರಸಾದ್ ಒಬ್ಬರ ಹೆಸರು ಯಾಕೆ ಹೇಳ್ತೀರಾ? ಅವರು ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಎಂದು ಹೇಳಿದರು.
ಸಾರಿಗೆ ಸಂಸ್ಥೆ ಶಕ್ತಿ ಕಳೆದುಕೊಂಡಿದೆ:
ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳಿಗೆ ಅನುಕೂವಾಗಿದೆ, ನಿಜ. ಆದರೆ ಸಾರಿಗೆ ಸಂಸ್ಥೆಯ ಪರಿಸ್ಥಿತಿ ಏನಾಗಿದೆ? ಸಾರಿಗೆ ಸಚಿವರೇ ಸಾಲ ಇರುವ ಬಗ್ಗೆ ಹೇಳಿದ್ದಾರೆ. ದಿನಗೂಲಿ ಆಧಾರದಲ್ಲಿ 9500 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಐದು ಸಾವಿರ ಹೊಸ ಬಸ್ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕೆಲ್ಲ ಹಣವನ್ನು ಎಲ್ಲಿಂದ ತರುತ್ತಾರೆ? ಎಂದು ಕುಮಾರಸ್ವಾಮಿ ಅವರು ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಮುಸ್ಲೀಮರಿಗೆ ಕೊಡುತ್ತೀರಿ ಸರಿ; ರೈತರಿಗೇನು ಕೊಡುತ್ತೀರಿ?
ಮುಸ್ಲಿಂ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂ. ನೀಡುತ್ತೇನೆ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕಿಡಿಕಿಡಿಯಾದ ಮಾಜಿ ಮುಖ್ಯಮಂತ್ರಿಗಳು, ಅವರು ಎರಡನೇ ಬಾರಿ ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದಾರೆ. ಜನರಲ್ಲಿ ಕೆಟ್ಟ ಭಾವನೆ ಮೂಡಿಸುವ ಪರಿಸ್ಥಿತಿಯನ್ನು ಅವರೇ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.
ಇವರಿಗೆ ಜಾತಿಗಣತಿ ಯಾಕೆ ಬೇಕು? ಈ ರಾಜ್ಯ-ದೇಶ ಉದ್ಧಾರ ಆಗಬೇಕಾದರೆ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಲಿ. ಜಾತಿಗಣತಿ ಮಾಡಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಈಗ ಮುಸ್ಲೀಮರಿಗೆ ಹಣ ಕೊಡುತ್ತೇವೆ ಎಂದು ಹೇಳಿ ಅವರ ಹೆಸರಿನಲ್ಲಿಯೂ ಅಲ್ಲೂ ಕಮಿಷನ್ ಹೊಡೆಯುತ್ತಾರೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದರು.
ಮುಸ್ಲಿಮರಿಗೇನೋ ಹತ್ತು ಸಾವಿರ ಕೋಟಿ ರೂ. ಕೋಡುತ್ತೀರಿ. ಉಳಿದವರ ಪಾಡೇನು? ರೈತರಿಗೆ ಏನು ಕೊಡುತ್ತೀರಿ? ರೈತರ ಮನೆ ಬಳಿ ಬ್ಯಾಂಕ್ ನವರು, ಖಾಸಗಿ ಲೇವಾದೇವಿಗಾರರು ಬಂದು ನಿಲ್ಲುತ್ತಿದ್ದಾರೆ.
ಅವರ ಕಡೆ ನಿಮ್ಮ ಕೊಡುಗೆ ಏನು? ಮತಕ್ಕಾಗಿ ಓಲೈಕೆ ಮಾಡಿಕೊಳ್ಳುತ್ತಿದ್ದೀರಿ. ಹತ್ತು ಸಾವಿರ ಕೋಟಿ ರೂ.ಕೊಟ್ಟು ಅವರಿಗೇನು ಚಿನ್ನದ ತಗಡು ಹೊರುಸ್ತಿರಾ? ನೀವು ಲೂಟಿ ಹೊಡೆಯಲು ಹೀಗೆ ಮಾಡುತ್ತಿದ್ದೀರಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಈ ಸರಕಾರದಲ್ಲೂ ಭ್ರಷ್ಟಾಚಾರ ಇದೆ ಅಂದಿದ್ದಾರೆ. ಈ ಸರಕಾರದ ಯೋಗ್ಯತೆ ಏನು ಎನ್ನುವುದು ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಎತ್ತಿನಹೊಳೆಯಿಂದ ಪ್ರವಾಹ ಬರುತ್ತದೆ!
ಎತ್ತಿನಹೊಳೆ ಟ್ರಯಲ್ ರನ್ ವೇಳೆ ಪೈಪ್ ಹೊಡೆದು ನೀರು ಹರಿದ ವಿಚಾರದ ಬಗ್ಗೆ ವ್ಯಂಗ್ಯವಾಡಿದ ಮಾಜಿ ಮುಖ್ಯಮಂತ್ರಿಗಳು, ಕೆಲ ದಿನಗಳ ಹಿಂದೆ ಎತ್ತಿನಹೊಳೆ ಯೋಜನೆ ಟ್ರಯಲ್ ರನ್ ಆಗಿದೆ. ಹಾಗೆ ಮಾಡುವಾಗ ಪೈಪ್ ಒಡೆದು ನೀರು ಹೊರಬಂದಿದೆ. ಮುಂದಿನ ದಿನಗಳಲ್ಲಿ ಎತ್ತಿನಹೊಳೆಯಿಂದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಪ್ರವಾಹವೇ ಬರಬಹುದು ಎಂದು ಸರಕಾರಕ್ಕೆ ಟಾಂಗ್ ಕೊಟ್ಟರು.