ಬಿಜೆಪಿ-ಜೆಡಿಎಸ್ ಸದನದಲ್ಲಿ ಮೌನ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷ ವಿಭಜಿಸಿ ಒಂದು ಗುಂಪನ್ನು ಹೊರತರಲು ಮುಂದಾಗಿರುವ ಹಿರಿಯ ಮಂತ್ರಿಯೊಬ್ಬರ ಭ್ರಚ್ಟಾಚಾರ ಹಗರಣಗಳ ಬಗ್ಗೆ ಬಿಜೆಪಿ-ಜೆಡಿಎಸ್ ಮೌನ ವಹಿಸಿವೆ.
ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತದಲ್ಲಿ ವರ್ಗಾವಣೆ ದಂಧೆ ಸೇರಿದಂತೆ ಭ್ರಷ್ಟಾಚಾರದ ಪ್ರಕರಣಗಳು, ಅದರಲ್ಲೂ ಇಬ್ಬರು-ಮೂವರು ಸಚಿವರಿಗೆ ಸಂಬಂಧಿಸಿದ ಹಗರಣಗಳನ್ನು ಸದನ ಮುಂದೆ ಇಟ್ಟು ಚರ್ಚಿಸುವುದಾಗಿ ಬಿಜೆಪಿ-ಜೆಡಿಎಸ್ ನಾಯಕರು ಹೇಳಿಕೆ ನೀಡಿದ್ದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೂ ಹಗರಣಗಳನ್ನು ಸದನದಲ್ಲಿ ಬಯಲು ಮಾಡುವುದಲ್ಲದೆ, ವರ್ಗಾವರ್ಗಿ ದಂಧೆಯ ಆಡಿಯೊ-ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.
ದೆಹಲಿ ಬಿಜೆಪಿ ವರಿಷ್ಠರಿಂದ ರಾಜ್ಯ ನಾಯಕರಿಗೆ ಸಂದೇಶ
ಆದರೆ, ದೆಹಲಿ ಬಿಜೆಪಿ ವರಿಷ್ಠರಿಂದ ರಾಜ್ಯ ನಾಯಕರಿಗೆ ಬಂದ ಸಂದೇಶದ ಹಿನ್ನೆಲೆಯಲ್ಲಿ ಹಗರಣಗಳ ಬಗ್ಗೆ ಪ್ರಸಕ್ತ ಅಧಿವೇಶನದಲ್ಲಿ ಚರ್ಚೆ ಮಾಡದಿರಲು ನಿರ್ಧರಿಸಿದ್ದಾರೆ.
ಜೆಡಿಎಸ್, ಎನ್‌ಡಿಎ ಮೈತ್ರಿ ಕೂಟ ಸೇರಿದ ನಂತರ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಹೇಗೆ ಕಟ್ಟಿಹಾಕಬೇಕೆಂಬ ಬಗ್ಗೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಸಭೆ ನಡೆಸಿದ್ದರು.
ಈ ಸಭೆಯಲ್ಲಿ, ಸರ್ಕಾರದ ವಿರುದ್ಧದ ಆರೋಪಗಳ ಬಗ್ಗೆ ನಾವು ಪ್ರಸ್ತಾಪ ಮಾಡುತ್ತೇವೆ, ನೀವು (ಕುಮಾರಸ್ವಾಮಿ) ಶಿವಕುಮಾರ್ ಹಗರಣಗಳನ್ನು ಬಯಲಿಗೆಳೆದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಎಂಬ ತೀರ್ಮಾನಕ್ಕೆ ಬಂದಿದ್ದವು.
ಆದರೆ, ಚಳಿಗಾಲದ ಅಧಿವೇಶನದಲ್ಲಿ ಇದುವರೆಗೂ ಯಾವುದೂ ಪ್ರಸ್ತಾಪವಾಗಿಲ್ಲ, ಪ್ರಭಾವಿ ಸಚಿವರು ಕಾಂಗ್ರೆಸ್ ತೊರೆದು ಬಿಜೆಪಿ ಜೊತೆ ಕೈಜೋಡಿಸುವ ಸಂದೇಶ ದೆಹಲಿಗೆ ಮುಟ್ಟಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಭ್ರಷ್ಟಾಚಾರದ ಹಗರಣ ಬೆಂಗಳೂರಿನ ಅಧಿವೇಶನದಲ್ಲಿ ಪ್ರಸ್ತಾಪ
ದೆಹಲಿ ಬಿಜೆಪಿ ವರಿಷ್ಠರು ಚಳಿಗಾಲದ ಅಧಿವೇಶನವನ್ನು ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತಿತರ ವಿಷಯಗಳಿಗೆ ಸೀಮಿತಗೊಳಿಸಿ, ಭ್ರಷ್ಟಾಚಾರದ ಹಗರಣಗಳನ್ನು ಬೆಂಗಳೂರಿನಲ್ಲಿ ನಡೆಯುವ ಜಂಟಿ ಮತ್ತು ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವಿರಂತೆ ಎಂಬ ಸಂದೇಶ ನೀಡಿದ್ದರು.
ಈ ಸಂದೇಶದ ಹಿನ್ನೆಲೆಯಲ್ಲಿ ಯಾವುದೇ ಹಗರಣಗಳ ಬಗ್ಗೆ ಚಕಾರವನ್ನೂ ಎತ್ತಲಿಲ್ಲ. ಇದರ ಮಧ್ಯೆ, ಕುಮಾರಸ್ವಾಮಿ, ನಿನ್ನೆ ಹಾಸನದಲ್ಲಿ ನೀಡಿದ ಹೇಳಿಕೆ ಇದಕ್ಕೆ ಕಾಕತಾಳೀಯವಾಗಿದೆ.
ತಮ್ಮ ಅಕ್ರಮಗಳಿಂದ ಪಾರಾಗಲು ಬಿಜೆಪಿ ಕೇಂದ್ರ ನಾಯಕರ ಜೊತೆ ಚೌಕಾಸಿ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವೀ ಮಂತ್ರಿಯೊಬ್ಬರು 50-60 ಶಾಸಕರನ್ನು ಕರೆದುಕೊಂಡು ಹೋಗಲು ಸಿದ್ಧರಾಗಿದ್ದಾರೆಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.
ಮೂರನೇ ವ್ಯಕ್ತಿಯ ಮೂಲಕ ಸಂದೇಶ
ಈ ಪ್ರಭಾವೀ ಸಚಿವರು ಕೇಂದ್ರದ ಬಿಜೆಪಿ ನಾಯಕರಿಗೆ ಮೂರನೇ ವ್ಯಕ್ತಿಯ ಮೂಲಕ ಸಂದೇಶ ಕಳುಹಿಸಿದ್ದಾರೆ, ಅಷ್ಟೇ ಅಲ್ಲದೆ, ಉನ್ನತ ಹುದ್ದೆಯಲ್ಲಿರುವ ಪ್ರಮುಖರೊಬ್ಬರನ್ನು ಕಳೆದ ಎರಡು ವಾರಗಳ ಹಿಂದೆ ಭೇಟಿ ಮಾಡಿ, ಸುಮಾರು 45 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.
ಕುಮಾರಸ್ವಾಮಿ ನಿನ್ನೆ ಬಾಂಬ್ ಸಿಡಿಸುತ್ತಿದ್ದಂತೆ ರಾಜ್ಯ ಮತ್ತು ದೆಹಲಿ ಮಟ್ಟದ ರಾಜಕೀಯ ವಲಯಗಳಲ್ಲಿ ಪ್ರಭಾವೀ ವ್ಯಕ್ತಿ ಶಿವಕುಮಾರ್ ಇರಬಹುದೇ ಎಂದು ಕೇಳಿಬರುತ್ತಿದೆ.
ಬಿಜೆಪಿ-ಜೆಡಿಎಸ್ ಹಗಲುಗನಸು
ಈ ಮಧ್ಯೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಹೇಳಿಕೆಯನ್ನು ವ್ಯಂಗ್ಯ ಮಾಡಿ, ಬಿಜೆಪಿ-ಜೆಡಿಎಸ್ ಹಗಲುಗನಸು ಕಾಣುತ್ತಿವೆ ಎಂದಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಏನೇನು ಬೆಳವಣಿಗೆ ಆಗುತ್ತದೆಯೋ ಕಾದು ನೋಡಬೇಕಿದೆ.