ಬೆಳಗಾವಿ: ಭೀಕರ ಬರಗಾಲದ ಹಿನ್ನಲೆಯಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸ್ತುತ ಇರುವ 100 ಮಾನವ ದಿನಗಳ ಸೃಜನೆಯ ಮಿತಿಯನ್ನು, 150ಕ್ಕೆ ಹೆಚ್ಚಿಸುವಂತೆ ಕೋರಿ 2 ತಿಂಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಬರಗಾಲದ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಜನರು ಉದ್ಯೋಗ ದೊರಕದೆ ಗುಳೆ ಹೋಗುವುದನ್ನು ತಡೆಯಲು ನರೇಗಾ ಪರಿಣಾಮಕಾರಿಯಾಗಿದೆ ಎಂದರು.
ಉದ್ಯೋಗ ಖಾತ್ರಿ ಕಾಯ್ದೆಯಲ್ಲಿ ಬರಗಾಲದ ಸಂದರ್ಭದಲ್ಲಿ ಹೆಚ್ಚುವರಿಯಾಗಿ 50 ಮಾನವ ದಿನಗಳನ್ನು ಸೃಜಿಸಲು ಅವಕಾಶವಿದೆ. ಈ ಕಾರಣದಿಂದಾಗಿ ಹೆಚ್ಚುವರಿ ಮಾನವ ದಿನಗಳ ಸೃಜನೆ ಅವಕಾಶ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಬರಗಾಲವನ್ನು ಎದುರಿಸಲು ಸಿದ್ದವಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಬಳಿ 800 ರಿಂದ 900 ಕೋಟಿ ರೂಪಾಯಿ ಹಣ ಲಭ್ಯವಿದೆ. ಇದನ್ನು ಕುಡಿಯುವ ನೀರು, ಮೇವು ಖರೀದಿ ಸೇರಿದಂತೆ ಅಗತ್ಯ ಕಾರ್ಯಗಳಿಗೆ ಬಳಸಬಹುದಾಗಿದೆ. ಸರ್ಕಾರ ಬರಗಾಲ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆಗೆ ಸಿದ್ದವಿದೆ.
ಮಹದಾಯಿ, ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ನೀರಾವರಿ ಯೋಜನೆಗಳ ಕುರಿತು ಸಮಪರ್ಕ ಉತ್ತರ ನೀಡಲಾಗುವುದು. ವಿರೋಧ ಪಕ್ಷಗಳು ಇದರ ಹೊರತಾಗಿ ಬೇರೆ ಯಾವುದೆ ವಿಚಾರವನ್ನು ಚರ್ಚಿಸಲು ಇಚ್ಛಿಸಿದರೆ ಸಭಾಧ್ಯಕ್ಷರಿಗೆ ನಿಯಮಾನುಸಾರ ನೋಟಿಸ್ ನೀಡಿ. ಇದರ ಬಗ್ಗೆಯೂ ಚರ್ಚಿಸಲು ಸರ್ಕಾರ ಸಿದ್ದವಿದೆ.
ಸದನದ ಕಲಾಪಗಳಿಗೆ ಅಡ್ಡಿಪಡಿಸಿ ಕಾಲವನ್ನು ಹರಣ ಮಾಡುವುದನ್ನು ಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
