ಮೇಲ್ಮನೆಯಲ್ಲಿ ಸಚಿವ ಸುಧಾಕರ್ ಭರವಸೆ
ಬೆಳಗಾವಿ: ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವುದು ಸರ್ಕಾರದ ಗಮನಕ್ಕಿದೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭರವಸೆ ನೀಡಿದರು.
ಲೋಕಸಭೆಯಲ್ಲಿ ಮೈಸೂರು ಯುವಕನ ದಾಂಧಲೆ
ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ವಿಪಕ್ಷ ಸದಸ್ಯ ಚಿದಾನಂದ ಅವರು ಅತಿಥಿ ಉಪನ್ಯಾಸಕರ ಹೋರಾಟ ಮತ್ತು ವಿದ್ಯಾರ್ಥಿಗಳ ಸಮಸ್ಯೆ ಕುರಿತು ಸಚಿವರ ಗಮನಕ್ಕೆ ತಂದರು.
ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿಕೊಂಡಿರುವ ಮಾದರಿಯನ್ನು ಅನುಸರಿಸಬೇಕು. ಈ ವಿಷಯದಲ್ಲಿ ಪ್ರತಿ ಸಲವೂ ಉಮಾದೇವಿ ಪ್ರಕರಣವನ್ನು ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರಿಗೆ ಆಗುವ ಅನ್ಯಾಯ ನಿಲ್ಲಬೇಕಾದರೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಯುಜಿಸಿ ನಿಗದಿಯಂತೆ ವೇತನ ಪರಿಷ್ಕರಣೆ ಮಾಡಿ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಚಿದಾನಂದ ಅವರು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಸಚಿವರು, ಅತಿಥಿ ಉಪನ್ಯಾಸಕರ ಸಮಸ್ಯೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉದ್ಭವಿಸಿದ್ದಲ್ಲ. ಸುಮಾರು 20 ವರ್ಷಗಳಿಂದ ಜೀವಂತವಾಗಿರುವ ಬೇಡಿಕೆ. ಈಗಾಗಲೇ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರೊಂದಿಗೆ ಮಾತನಾಡಿ, ಹೋರಾಟ ಕೈ ಬಿಡುವಂತೆ ಮನವೊಲಿಸುವ ಪ್ರಯತ್ನ ವಿಫಲವಾಗಿದೆ ಎಂದರು.
ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದು, ಪರಿಹಾರ ಕಂಡುಕೊಂಡಿದ್ದೇವೆ. ಅದಕ್ಕೆ ಕೊಂಚ ಕಾಲಾವಕಾಶದ ಅಗತ್ಯವಿದೆ. ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸಚಿವರು ಸದನದಲ್ಲಿ ಭರವಸೆ ನೀಡಿದರು.