ಪಕ್ಷದ ವರಿಷ್ಠರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ತಂತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಪ್ರಭಾವೀ ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಗುಟ್ಟಾಗಿ ಭೇಟಿ ಮಾಡಲು ಪ್ರಯತ್ನ ನಡೆಸಿದ್ದು ಬಹಿರಂಗಗೊಂಡಿದೆ.
ಯುಎಇನಲ್ಲಿ ನಡೆದ ಹವಾಮಾನ ವೈಪರೀತ್ಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 1ರಂದು ತೆರಳಿದ್ದ ಪ್ರಧಾನಿ ಅವರನ್ನು ಭೇಟಿ ಮಾಡಲು ಹರಸಾಹಸ ನಡೆಸಿದ್ದರು.
ಕೇಂದ್ರದ ಪ್ರಭಾವೀ ನಾಯಕರು ಹಾಗೂ ಕಾನೂನು ತಜ್ಞರೊಬ್ಬರ ಮುಖಾಂತರ ಪ್ರಧಾನಿ ಭೇಟಿಗೆ ಈ ಸಚಿವರು ಪ್ರಯತ್ನ ಮಾಡಿದ್ದರು.
ಯುಎಇಗೆ ತೆರಳಲು ವಿಮಾನ ಕಾಯ್ದಿರಿಸುವ ಕಾರ್ಯವೂ ಈ ನಾಯಕನಿಂದ ನಡೆದಿತ್ತು ಎನ್ನಲಾಗಿದೆ.
ಯುಎಇನಲ್ಲಿ ಭೇಟಿಗೆ ಅವಕಾಶ ದೊರೆಯಲಿಲ್ಲ
ಆದರೆ, ಪ್ರಧಾನಿ ಅವರ ಬಿಡುವಿಲ್ಲದ ಕಾರ್ಯಕ್ರಮಗಳು ಮೊದಲೇ ನಿಗದಿಯಾಗಿದ್ದರಿಂದ ಯುಎಇನಲ್ಲಿ ಭೇಟಿಗೆ ಅವಕಾಶ ದೊರೆಯಲಿಲ್ಲ.
ಇವರ ಭೇಟಿಯನ್ನು ಪ್ರಧಾನಿ ಅವರು ನಿರಾಕರಿಸಿಲ್ಲ, ಆದರೆ, ಸಮಯ ದೊರೆತಿಲ್ಲ, ಈ ನಾಯಕರು ಕೆಲವು ಶಾಸಕರ ಜೊತೆಗೂಡಿ ಕರ್ನಾಟಕದಲ್ಲಿ ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎಂಬ ಮಾತು ದಟ್ಟವಾಗಿ ಹರಡಿದೆ.
ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿದರೆ ರಾಜಕೀಯವಾಗಿ ಗುಲ್ಲೆಬ್ಬುತ್ತದೆ, ಒಬ್ಬ ಮಂತ್ರಿಯಾಗಿ ಮೋದಿ ಭೇಟಿ ಮಾಡಿದರೆ ತಪ್ಪಿಲ್ಲ, ಆದರೆ, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರಿಗೂ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಭೇಟಿಗೆ ಸಮಯ ನೀಡಿಲ್ಲ.
ವಿದೇಶದಲ್ಲಿ ಭೇಟಿ ಮಾಡುವ ಪ್ರಯತ್ನ
ಇಂತಹ ಸಂದರ್ಭದಲ್ಲಿ ತಾವು ದೆಹಲಿಯಲ್ಲಿ ಭೇಟಿ ಮಾಡಿದರೆ, ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ವಿದೇಶದಲ್ಲಿ ಭೇಟಿ ಮಾಡುವ ಪ್ರಯತ್ನ ಮಾಡಿದ್ದರು.
ಪ್ರಧಾನಿ ಭೇಟಿಗೂ ಮುನ್ನ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ಈಗ ಇತರೆ ಉನ್ನತ ಸ್ಥಾನದಲ್ಲಿರುವ ಮುಖಂಡರೊಬ್ಬರನ್ನು ಭೇಟಿ ಮಾಡಿ ಚರ್ಚಿಸಿದ್ದು ಗುಟ್ಟಾಗಿ ಉಳಿದಿಲ್ಲ.
ಕಾಂಗ್ರೆಸ್‌ನಿಂದ ಪ್ರತ್ಯೇಕವಾಗಿ ಬಿಜೆಪಿ ಜೊತೆ ಸೇರಲು ಚೌಕಾಸಿ
ಈ ಬೆಳವಣಿಗೆ ನಂತರವೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ೫೦-೬೦ ಶಾಸಕರ ಜೊತೆಗೂಡಿ ಕಾಂಗ್ರೆಸ್‌ನಿಂದ ಪ್ರತ್ಯೇಕವಾಗಿ ಬಿಜೆಪಿ ಜೊತೆ ಸೇರಲು ಚೌಕಾಸಿ ನಡೆಸುತ್ತಿದ್ದಾರೆಂದು ಬಾಂಬ್ ಸಿಡಿಸಿದ್ದರು.
ಕುಮಾರಸ್ವಾಮಿ ಹೇಳಿಕೆ ನಂತರ ದೆಹಲಿ ಮತ್ತು ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು.
ಇವರ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಹೋದ್ಯೋಗಿಗಳು ಅಲ್ಲಗಳೆದಿದ್ದಲ್ಲದೆ, ಕುಮಾರಸ್ವಾಮಿ ಅಧಿಕಾರ ಇಲ್ಲದೆ, ವಿಲ-ವಿಲ ಒದ್ದಾಡುತ್ತಿದ್ದಾರೆ ಎಂದಿದ್ದರು.
ಮುಖ್ಯಮಂತ್ರಿ ಹೇಳಿಕೆ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ತೊರೆಯಲು ನಾನೇನು ಹುಚ್ಚನೇ ಎಂದು ಕಿಡಿ ಕಾರಿದ್ದರು.
ಕುಮಾರಸ್ವಾಮಿ, ಶಿವಕುಮಾರ್ ಹೆಸರನ್ನೇ ಪ್ರಸ್ತಾಪಿಸಿರಲಿಲ್ಲ, ಅವರು ಅಂತಹ ಹೇಳಿಕೆ ಏತಕ್ಕೆ ನೀಡಿದರೋ ತಿಳಿದಿಲ್ಲ, ಆದರೆ, ಚೌಕಾಸಿ ನಾಯಕರಂತೂ ಪ್ರಧಾನಿ ಅವರೊಂದಿಗೆ ಚರ್ಚೆ ನಂತರವೇ ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ಕಮಲದ ವಲಯಗಳು ಹೇಳುತ್ತಿವೆ.
1 comment
[…] ರಾಜ್ಯ […]