ಹೊಸ ವರ್ಷಾಚರಣೆಗೆ ಕರಿ ಛಾಯೆ
ಬೆಂಗಳೂರು:ಕೊರೊನಾ ರೂಪಾಂತರಿ ತಳಿ ಜೆಎನ್.1 ರಾಜ್ಯದಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟವರು, ಉಸಿರಾಟದ ತೊಂದರೆ ಇರುವವರು ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮಾಸ್ಕ್ ಕಡ್ಡಾಯ.
ರಾಷ್ಟ್ರದ ವಿವಿಧ ಭಾಗಗಳಲ್ಲಿ ರೂಪಾಂತರಿ ತಳಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ.
ಸಲಹಾ ಸಮಿತಿ ಸರ್ಕಾರಕ್ಕೆ ಹಲವು ಸಲಹೆ
ಡಾ. ರವಿ ನೇತೃತ್ವದ ಸಲಹಾ ಸಮಿತಿ ಕಳೆದ ಎರಡು ದಿನಗಳಿಂದ ಸಭೆ ನಡೆಸಿ ಸರ್ಕಾರಕ್ಕೆ ಹಲವು ಸಲಹೆ, ಸೂಚನೆಗಳನ್ನು ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಾಳೆ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಸಲಹಾ ಸಮಿತಿಯ ಶಿಫಾರಸುಗಳನ್ನು ಆದೇಶದ ಮೂಲಕ ಜಾರಿಗೊಳಿಸಲಿದೆ.
ರೂಪಾಂತರಿ ತಳಿ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ, ಆದರೆ ಎಚ್ಚರಿಕೆ ಅವಶ್ಯಕ ಎಂದಿರುವ ಸಲಹಾ ಸಮಿತಿ, ರಾಜ್ಯಾದ್ಯಂತ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸುವಂತೆ ಸಲಹೆ ಮಾಡಿದೆ.
ಗಡಿ ಜಿಲ್ಲೆಗಳ ಭಾಗದಲ್ಲಿ ಹೆಚ್ಚಿನ ಮುಂಜಾಗ್ರತೆ
ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಾಮರಾಜನಗರ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಭಾಗದಲ್ಲಿ ಒಂದಷ್ಟು ಹೆಚ್ಚಿನ ಮುಂಜಾಗ್ರತೆ ಅವಶ್ಯವಿದೆ.
ಕೋವಿಡ್ ಲಸಿಕೆ ನೀಡುವುದರ ಜೊತೆಗೆ ಪರೀಕ್ಷೆಗಳನ್ನು ಹೆಚ್ಚಿಸಿ, ಇದರ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.
ಉಸಿರಾಟದ ಸಮಸ್ಯೆ ಇರುವವರಿಗೆ ಮೊದಲ ಹಂತದಲ್ಲಿ ಪರೀಕ್ಷೆ ಮಾಡಿದರೆ, ಇದರ ಫಲಿತಾಂಶದ ಆಧಾರದ ಮೇಲೆ ಈ ಸಾಂಕ್ರಾಮಿಕದ ಸ್ವರೂಪ ತಿಳಿಯಲು ಸಾಧ್ಯ ಎಂದು ವೈದ್ಯರ ತಂಡ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದೆ.
60 ವರ್ಷ ಮೇಲ್ಪಟ್ಟವರು ಮತ್ತು ತೀವ್ರ ಆರೋಗ್ಯ ಸಮಸ್ಯೆ ಇರುವವರು ಮಾಸ್ಕ್ ಧರಿಸುವ ಜೊತೆಗೆ ಜನಸಂದಣಿಯಿಂದ ದೂರ ಉಳಿಯುವುದು ಉತ್ತಮ.
ಮುನ್ನೆಚ್ಚರಿಕೆಯಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ನಿಗಾ ಘಟಕಗಳನ್ನು ಮೀಸಲಿಡಬೇಕು, ಪ್ರಾಥಮಿಕ ಜಿಲ್ಲಾ ಆಸ್ಪತ್ರೆಗಳಲ್ಲೂ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುವಂತಾಗಬೇಕು, ಸೋಂಕಿಗೆ ಅಗತ್ಯವಿರುವ ಔಷಧಗಳು ಮತ್ತು ಆಕ್ಸಿಜನ್ ಸಿದ್ಧತೆ ಮಾಡಿಕೊಳ್ಳುವಂತೆಯೂ ಸೂಚಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿ ನೀಡಿಲ್ಲ
ಹೊಸ ರೂಪಾಂತರಿ ತಳಿ ಬಗ್ಗೆ ಇದುವರೆಗೂ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ.
ಆದರೆ ರೂಪಾಂತರಿ ತಳಿ ರಾಷ್ಟ್ರದಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ನಾವು ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವುದು ಅವಶ್ಯಕ ಎಂದಿದ್ದಾರೆ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶೀತ, ಜ್ವರ, ಕೆಮ್ಮು ಇರುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು, ಪಾಸಿಟಿವ್ ಪ್ರಕರಣಗಳು ಹೆಚ್ಚಾದರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ, ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲದ ಕಾರಣ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.